National
ಕಾಸರಗೋಡಿಗೆ ಕೊರೊನಾ ಕಾಲಿಟ್ಟು ಅರ್ಧ ವರ್ಷ ಕಳೆದರೂ, ಕಡಿಮೆಯಾಗಿಲ್ಲ ಸೋಂಕು ಪ್ರಸರಣ
- Mon, Aug 03 2020 11:55:00 AM
-
ಕಾಸರಗೋಡು,ಆ 3(DaijiworldNews/HR) : ಕಾಸರಗೋಡಿಗೆ ಕೊರೊನ ಸೋಂಕು ಕಾಲಿಟ್ಟು, ಇಂದಿಗೆ ಆರು ತಿಂಗಳು. ಫೆಬ್ರವರಿ ಮೂರರಂದು ಕಾಸರಗೋಡಿನಲ್ಲಿ ಮೊದಲ ದೇಶದಲ್ಲೇ ಮೂರನೇ ಕೊರೋನಾ ಪಾಸಿಟಿವ್ ದೃಡಪಟ್ಟಿತ್ತು.
ಚೀನಾದ ವುಹಾನ್ ನಿಂದ ಬಂದಿದ್ದ ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾಗಿತ್ತು. ಸೋಂಕು ಕಂಡುಬಂದ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿತ್ತು. ಫೆಬ್ರವರಿ 16 ರಂದು ಸೋಂಕಿತ ವಿದ್ಯಾರ್ಥಿ ಗುಣಮುಖರಾಗಿ ಬಿಡುಗಡೆಗೊಂಡನು. ಆದರೆ ಮಾರ್ಚ್ 17 ರಂದು ದುಬಾಯಿಯಿಂದ ಬಂದಿದ್ದ ವ್ಯಕ್ತಿಯ ಮೂಲಕ ಇಬ್ಬರಿಗೆ ಸೋಂಕು ಮತ್ತೆ ದೃಡಪಟ್ಟಿತ್ತು. ಬಳಿಕ ಮುಂಬರುವ ದಿನಗಳಲ್ಲಿ ಸೋಂಕು ಹೆಚ್ಚುತ್ತಲೇ ಸಾಗಿತು . 20 ರಂದು 8, 21 ಮತ್ತು 22 ರಂದು ತಲಾ ಐವರಿಗೆ , 23 ರಂದು 19 ಮಂದಿ ಹಾಗೂ 27 ರಂದು 33 ಮಂದಿಯಲ್ಲೂ ಸೋಂಕು ದೃಡಪಟ್ಟಿತ್ತು.
ಆದರೆ ಲಾಕ್ ಡೌನ್ ಹಾಗೂ ಆರೋಗ್ಯ ಇಲಾಖೆ ತೆಗೆದುಕೊಂಡ ದಿಟ್ಟ ಕ್ರಮದಿಂದ ಬಳಿಕದ ದಿನಗಳಲ್ಲಿ ಸೋಂಕಿತರ ಸಂಖ್ಯೆ ಒಂದಂಕಿ ದಾಟದಂತೆ ನಿಯಂತ್ರಿಸಲಾಗಿತ್ತು. ಸೋಂಕು ಹರಡುವ ಸೂಚನೆ ಲಭಿಸುತ್ತಿದ್ದಂತೆ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಎಲ್ಲಾ ರೀತಿಯ ಕ್ರಮಕ್ಕೂ ಮುಂದಾಗಿತ್ತು.
ಮಾರ್ಚ್ 22 ರಿಂದ ಜಿಲ್ಲೆಯಲ್ಲಿ ಲಾಕ್ ಡೌನ್ ಜಾರಿ ಮಾಡಿತ್ತು. ಗಡಿ ಮೂಲಕ ಪ್ರವೇಶವನ್ನು ಬಂದ್ ಮಾಡಲಾಗಿತ್ತು . ಕರ್ನಾಟಕ - ಕೇರಳ ನಡುವಿನ ಅಂತಾರಾಜ್ಯ ಸಂಪರ್ಕದ ಎಲ್ಲಾ ರಸ್ತೆ ಗಳನ್ನು ಬಂದ್ ಮಾಡಿತ್ತು. ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಳಿಸಿತ್ತು. ಶಾಲಾ ಕಾಲೇಜುಗಳೂ ಬಂದ್ ಮಾಡಿ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ನಿಯಂತ್ರಣಗಳನ್ನು ಜಾರಿಗೆ ತರಲಾಯಿತು.
ಇದರ ನಡುವೆ ಕೊರೋನ ಸೋಂಕಿತ ಗಲ್ಫ್ ಉದ್ಯೋಗಿ ಕ್ವಾರಂಟೈನ್ ಉಲ್ಲಂಘಿಸಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವುದು ಹಾಗೂ ಹಲವೆಡೆಗೆ ತೆರಳಿರುವ ಬಗ್ಗೆ ಮಾಹಿತಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯನ್ನು ಹುಬ್ಬೇರಿಸಿತ್ತು. ಇದರಿಂದ ಈತನ ಸಂಪರ್ಕದಲ್ಲಿದ್ದ ಕಾಸರಗೋಡು ಮತ್ತು ಮಂಜೇಶ್ವರ ಶಾಸಕರು ಸೇರಿದಂತೆ ನೂರಾರು ಮಂದಿ ಕ್ವಾರಂಟೈನ್ ಗೆ ತೆರಳುವಂತಾಯಿತು. ಬಳಿಕ ನಡೆದ ತಪಾಸಣೆಯಿಂದ ಈತನಿಂದ 22 ಮಂದಿಗೆ ಸೋಂಕು ತಗ ಲಿ ರುವುದು ಪತ್ತೆಯಾಗಿತ್ತು. ಸೋಂಕಿತರು ಮಾನದಂಡ ಉಲ್ಲಂಘಿಸುತ್ತಿರುವುದನ್ನು ಗಮನಿಸಿದ ಜಿಲ್ಲಾಡಳಿತ ಸಾಕಷ್ಟು ನಿಯಂತ್ರಣಗಳನ್ನು ಜಾರಿಗೆ ತಂದಿದ್ದು, ನಗರ ಪ್ರದೇಶಗಳಲ್ಲಿ ಕಟ್ಟು ನಿಟ್ಟಿನ ನಿರ್ಬಂಧಗಳನ್ನು ಜಾರಿ ಮಾಡಿತು.
ಸೋಂಕಿತರ ಚಿಕಿತ್ಸೆಗೆ ಕಾಸರಗೋಡು ಜನರಲ್ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ವಾರ್ಡ್ ತೆರೆಯಲಾಯಿತು. ಕ್ವಾರಂಟೈನ್ ಗೂ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ನಡುವೆ ಜಿಲ್ಲಾಧಿಕಾರಿ ಡಾ.ಡಿ ಸಜಿತ್ ಬಾಬು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಡಾ. ವಿ ರಾಮ ದಾಸ್ ರವರ ವಿಶೇಷ ಮುತುವರ್ಜಿಯಿಂದ ಉಕ್ಕಿನಡ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ದಿನಗಳ ಅಂತರದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲಾಯಿತು. 300 ಹಾಸಿಗೆಗಳ ವ್ಯವಸ್ಥೆ ಮಾಡಲಾಯಿತು .
ಈ ನಡುವೆ ಕರ್ನಾಟಕಕ್ಕೆ ಸಂಪರ್ಕ ಬಂದ್ ಆದುದರಿಂದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಸೂಕ್ತ ಚಿಕಿತ್ಸೆ ಲಭಿಸದೆ ಬಲಿಯಾಗುವ ಸ್ಥಿತಿಗೂ ತಲುಪಿತ್ತು. ಇದು ಪ್ರತಿಭಟನೆ , ಆರೋಪ - ಪ್ರತ್ಯಾರೋಪಕ್ಕೂ ಕಾರಣವಾಯಿತು . ಕಾನೂನು ಹೋರಾಟಕ್ಕೂ ವೇದಿಕೆಯಾಯಿತು. ನಂತರ ಟಾಟಾ ಗ್ರೂಫ್ ಕಾಸರಗೋಡಿನಲ್ಲಿ ಸುಸಜ್ಜಿತವಾದ
ಅತ್ಯಾಧುನಿಕ ಸೌಲಭ್ಯ ಗಳೊಂದಿಗೆ ಕೂಡಿದ ಒಂದು ಸಾವಿರ ಹಾಸಿಗೆಗಳ ಕೋವಿಡ್ ಆಸ್ಪತ್ರೆಗೆ ಮುಂಗಾಡುವ ಮೂಲಕ ಗಮನ ಸೆಳೆಯಿತು .ಕಾಸರಗೋಡು ನಗರದಿಂದ ಎಂಟು ಕಿ. ಮೀ ದೂರದ ಚಟ್ಟಂಚಾಲ್ ಸಮೀಪ ರಾಜ್ಯ ಸರಕಾರದ ಸಹಯೋಗದಲ್ಲಿ ಈ ಆಸ್ಪತ್ರೆ ಈಗ ಅಂತಿಮ ಹಂತದಲ್ಲಿದೆ ಈ ಬೆಳವಣಿಗೆ ನಡುವೆ ಜಿಲ್ಲೆಯೂ ಮೇ 10 ರ ವೇಳೆಗೆ ಸಂಪೂರ್ಣ ಸೋಂಕು ಮುಕ್ತವಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲೇ ಕೇರಳ ಗಮನ ಸೆಳೆಯಿತು. ಎರಡು ಹಂತಗಳಲ್ಲಿ 178 ಸೋಕಿತರು ಗುಣಮುಖರಾಗಿದ್ದು, ಮಾತ್ರವಲ್ಲ ಒಬ್ಬರೂ ಸೋಂಕಿನಿಂದ ಬಲಿಯಾಗದಿರುವುದು ಆರೋಗ್ಯ ಇಲಾಖೆಯ ದಿಟ್ಟ ಹೋರಾಟಕ್ಕೆ ನಿದರ್ಶನ ಆಗಿತ್ತು. ಮೇ 10 ರಂದು ಜಿಲ್ಲೆ ಸಂಪೂರ್ಣ ಸೋಂಕು ಮುಕ್ತವಾದರೂ ಮೇ 11 ರಂದು ಮತ್ತೆ ನಾಲ್ವರಿಗೆ ಸೋಂಕು ದೃಡಪಟ್ಟಿತ್ತು. ವಿದೇಶದಿಂದ ಹಾಗೂ ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಲು ಅನುಮತಿ ಲಭಿಸಿದ ಬಳಿಕ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚಳ ಕಂಡಿತ್ತು.
ಜುಲೈ 21 ರಂದು ಎರಡಂಕೆಗೆ ಸೀಮಿತವಾಗಿದ್ದ ಸೋಂಕಿತರ ಸಂಖ್ಯೆ ಜುಲೈ 22 ರಂದು ಶತಕ ಬಾರಿಸಿತು. 22 ರಂದು 101 ಕ್ಕೆ ತಲಪಿತ್ತು. 24 ರಿಂದ 27 ರ ತನಕ ಮತ್ತೆ ನೂರರ ಗಡಿಯನ್ನು ದಾಟಿತ್ತು. 27 ರಿಂದ 31ರ ತನಕ ಎರಡಂಕೆಗೆ ಸೀಮಿತವಾಗಿದ್ದರೂ ಆಗಸ್ಟ್ ಒಂದರಂದು 153 ಕ್ಕೇರಿತು. ಆಗಸ್ಟ್ 2 ರಂದು ಸೋಂಕಿತರ ಸಂಖ್ಯೆ 113 ಆಗಿದ್ದು, ಎರಡು ದಿನಗಳಲ್ಲಿ 266 ಸೋಂಕು ದೃಡಪಟ್ಟಿದೆ.
ಕಳೆದ ಒಂದು ವಾರದ ಅವಧಿಯಲ್ಲಿ ಸೋಂಕಿತರ ಸಂಖ್ಯೆ 600 ದಾಟಿದೆ. ಮೊದಲ ಹಾಗೂ ಎರಡನೇ ಹಂತದಲ್ಲಿ 178 ಕ್ಕೆ ಸೀಮಿತವಾಗಿದ್ದ ಸೋಂಕಿತರ ಸಂಖ್ಯೆ ಮೂರನೇ ಹಂತದಲ್ಲಿ 1731 ಮಂದಿಗೆ ಸೋಂಕು ತಗಲಿದೆ . ಈ ಪೈಕಿ 961 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದೆ . ಉಳಿದವರು ಹೊರ ರಾಜ್ಯ ಹಾಗೂ ವಿದೇಶದಿಂದ ಬಂದವರು. ಆರಂಭದಲ್ಲಿ ಸೋಂಕು ಹರಡುವಿಕೆಯನ್ನು ಕಟ್ಟಿ ಹಾಕಿದ ಜಿಲ್ಲೆಯೂ ಮೂರನೇ ಹಂತದಲ್ಲಿ ಸವಾಲಾಗಿ ಪರಿಣಮಿಸಿದೆ.
ಗಡಿಯ ಮಂಜೇಶ್ವರ, ಮಂಗಲ್ಪಾಡಿ, ವರ್ಕಾಡಿ, ಕುಂಬಳೆ ಸೇರಿದಂತೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೂರನೇ ಹಂತದಲ್ಲಿ ಸಂಪರ್ಕ ದಿಂದ ಸೋಂಕು ಹರಡುತ್ತಿದೆ. ಜನರು ಆರೋಗ್ಯ ಇಲಾಖೆಯ ಮಾನದಂಡ ಪಾಲಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸವಾಲಾಗಲಿದೆ. ಜಿಲ್ಲೆಯಲ್ಲಿ ಐದು ತಿಂಗಳಲ್ಲಿ 500 ಮಂದಿಗೆ ಸೋಂಕು ದ್ರಢಪಟ್ಟರೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಒಂದು ಸಾವಿರ ದಷ್ಟು ಮಂದಿಗೆ ಸೋಂಕು ಪತ್ತೆಯಾಗಿದೆ. ಇದರಿಂದ ಅತೀ ವೇಗದಲ್ಲಿ ಜಿಲ್ಲೆಯಲ್ಲಿ ಸೋಂಕು ಹರಡುತ್ತಿದೆಯೇ ಎಂಬ ಆತಂಕ ತಲೆದೋರಿದೆ.
ಇದುವರೆಗೆ ಜಿಲ್ಲೆಯಲ್ಲಿ 1,797 ಮಂದಿಗೆ ಸೋಂಕು ತಗಲಿದ್ದು, ಈ ಪೈಕಿ 752 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1039 ಮಂದಿ ಗುಣಮುಖರಾಗಿದ್ದಾರೆ. ಮೂರನೇ ಹಂತದಲ್ಲಿ ಮಾತ್ರ 1618 ಮಂದಿಗೆ ಸೋಂಕು ದೃಡಪಟ್ಟಿದೆ.ಈ ವರೆಗೆ ಜಿಲ್ಲೆಯಲ್ಲಿ ಆರು ಮೃತಪಟ್ಟಿದ್ದ, ಪ್ರಾಥಮಿಕ ಸಂಪರ್ಕದಿಂದ ಸೋಂಕು ಹರಡುತ್ತಿರುವುದು ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.