ನವದೆಹಲಿ, ಆ. 03 (DaijiworldNews/MB) : ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ದೆಹಲಿಯಲ್ಲಿ ನಡೆದ ಗಲಭೆಗೆ ತಾನೇ ಪ್ರಚೋದನೆ ನೀಡಿದ್ದು ಎಂದು ಉಚ್ಚಾಟಿತ ನಗರಪಾಲಿಕೆ ಸದಸ್ಯ ತಾಹಿರ್ ಹುಸೇನ್ ಒಪ್ಪಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸರ ವಿಶೇಷ ತನಿಖಾ ತಂಡ (ಎಸ್ಟಿಎಫ್) ಭಾನುವಾರ ತಿಳಿಸಿದೆ.
ವಿಚಾರಣೆಯ ಸಂದರ್ಭದಲ್ಲಿ ತಾಹಿರ್ ಹುಸೇನ್ ಹಣ ಹಾಗೂ ರಾಜಕೀಯ ಪ್ರಭಾವ ಬಳಸಿಕೊಂಡು ಹಿಂದೂಗಳಿಗೆ ಪಾಠ ಕಲಿಸಲೆಂದೇ ತಾನು ಈ ಗಲಭೆಗೆ ಕುಮ್ಮಕ್ಕು ನೀಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಲಭೆ ನಡೆಸಲು ಜನರನ್ನು ಪ್ರಚೋದಿಸಲು ಜೆಎನ್ಯು ಮಾಜಿ ವಿದ್ಯಾರ್ಥಿ ಉಮರ್ ಖಲೀದ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಡ್ಯಾನಿಶ್ ಮೊದಲಾದವರ ಸಹಾಯ ಪಡೆದಿರುವುದಾಗಿ ಹಾಗೂ ಸುಪ್ರೀಂಕೋರ್ಟ್ನಿಂದ ರಾಮ ಮಂದಿರ ತೀರ್ಪು, ಆರ್ಟಿಕಲ್ 370 ರದ್ದು ಹಾಗೂ ಪೌರತ್ವ ತಿದ್ದುಪಡಿ ವಿಚಾರದಲ್ಲಿ ತೀವ್ರ ಕೋಪಗೊಂಡು ಈ ಗಲಭೆಯ ನಿರ್ಧಾರ ಮಾಡಿರುವುದಾಗಿ ತಾಹಿರ್ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಅಷ್ಟೇ ಅಲ್ಲದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸುವ ಸಂದರ್ಭದಲ್ಲೂ ಏನಾದರೂ ಮಾಡಬೇಕು ಎಂದು ತಾಹೀರ್ ಹಾಗೂ ಆತನ ಗೆಳೆಯರು ಸಭೆ ನಡೆಸಿದ್ದಾರೆ. ಗಲಭೆ ಸಷ್ಟಿಸುವ ನಿಟ್ಟಿನಲ್ಲಿ ಗಲಭೆಕೋರರಿಗೆ ಬೇಕಾದ ಪೆಟ್ರೋಲ್ ಬಾಂಬ್, ಕಲ್ಲು ಇನ್ನಿತರ ಮಾರಕ ವಸ್ತುಗಳನ್ನು ತಾಹಿರ್ ತನ್ನ ಮನೆ ಮೇಲ್ಚಾವಣಿ ಮೇಲೆ ತಂದು ಇಟ್ಟಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.