ನವದೆಹಲಿ, ಆ 03 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಆಧ್ಯಾತ್ಮಿಕ ಮಾರ್ಗದರ್ಶಕರಾದ ಮಾತಾ ಅಮೃತಾನಂದಮಯಿ ಅವರ ರಕ್ಷಾಬಂಧನದ ಶುಭಾಶಯಗಳನ್ನು ಸ್ವೀಕರಿಸಿದ್ದು, ಭಾರತೀಯ ನಾರಿ ಶಕ್ತಿಯ ಆಶೀರ್ವಾದ ನನಗೆ ಹೆಚ್ಚಿನ ಬಲ ನೀಡಿದೆ ಎಂದು ಹೇಳಿದ್ದಾರೆ.
ಟ್ವೀಟ್ನಲ್ಲಿ ವಿಡಿಯೋ ಮೂಲಕ ಮಾತನಾಡಿದ ಮಾತಾ ಅಮೃತಾನಂದಮಯಿ ಅವರು, ಕೊರೊನಾದಿಂದ ದೇಶವು ಆರ್ಥಿಕ ಬಿಕ್ಕಟ್ಟು ಹಾಗೂ ಕೆಲವು ಸವಾಲುಗಳನ್ನು ಎದುರಿಸುತ್ತಿದೆ. ಇಂತಹ ಸಂಕಷ್ಟದ ಸಂದರ್ಭದ ನಡುವೆಯೂ ಕೂಡಾ ಅನೇಕ ಸವಾಲುಗಳನ್ನು ಎದುರಿಸಲು ಹಾಗೂ ಜನರ ಹಿತದೃಷ್ಟಿಗಾಗಿ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಲು ನಿಮಗೆ ಹೆಚ್ಚಿನ ಧೈರ್ಯ ಸಿಗಲಿ ಎಂದು ಆಶೀರ್ವಾದ ನೀಡಿದರು.
ಪ್ರಧಾನಿ ಮೋದಿ ಅವರು ಶ್ಲಾಘನೀಯ ಹಾಗೂ ಗಮನಾರ್ಹವಾದ ಕಾರ್ಯಗಳನ್ನು ಮಾಡುತ್ತಿದ್ದಾರೆ. ರಕ್ಷಾಬಂಧನದ ಈ ಸಂದರ್ಭದಲ್ಲಿ, ಮುಂಬರುವ ಸವಾಲುಗಳನ್ನು ಎದುರಿಸಲು ಅವರಿಗೆ ಇನ್ನೂ ಹೆಚ್ಚಿನ ಧೈರ್ಯ ನೀಡುವಂತೆ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.
ಈ ಬಗ್ಗೆ ಟ್ವೀಟ್ನಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ಅವರು, ಮಾತಾ ಅಮೃತಾನಂದಮಯಿ ಅವರ ಶುಭಾಶಯಗಳಿಗೆ ವಿನಮ್ರನಾಗಿದ್ದೇನೆ. ನಮ್ಮ ರಾಷ್ಟ್ರಕ್ಕಾಗಿ ಕೆಲಸ ಮಾಡುವುದು ನನ್ನ ಕರ್ತವ್ಯ. ಭಾರತೀಯ ನಾರಿ ಶಕ್ತಿಯ ಆಶೀರ್ವಾದ ನನಗೆ ಹೆಚ್ಚಿನ ಬಲ ನೀಡಿದೆ. ಭಾರತದ ಅಭಿವೃದ್ದಿಗೆ ಇದು ಮುಖ್ಯವಾಗಿದೆ ಎಂದು ಹೇಳಿದರು.