ಅಯೋಧ್ಯೆ, ಆ. 03 (DaijiworldNews/MB) : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸಿದ ಪ್ರಮುಖರಲ್ಲಿ ಓರ್ವರಾದ ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಅವರು ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆಯುವ ಭೂಮಿ ಪೂಜೆ ಕಾರ್ಯಕ್ರಮದಿಂದ ದೂರ ಉಳಿಯುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಕಾರ್ಯಕ್ರಮದಲ್ಲಿ ಭಾಗಿಯಾಗುವವರ ಪಟ್ಟಿಯಿಂದ ನನ್ನ ಹೆಸರನ್ನು ತೆಗೆದುಹಾಕುವಂತೆ ರಾಮ ಮಂದಿರದ ಅಧಿಕಾರಿಗಳಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಸೂಚಿಸಿದ್ದೇನೆ'' ಎಂದು ಹೇಳಿದ್ದಾರೆ.
''ನಾನು ಇಂದು ಭೋಪಾಲ್ನಿಂದ ಹೊರಟು ನಾಳೆ ಸಂಜೆ ಅಯೋಧ್ಯೆಯನ್ನು ತಲುಪುವವರೆಗೂ ನಾನು ಸೋಂಕಿತ ವ್ಯಕ್ತಿಗಳ ಸಂಪರ್ಕಕ್ಕೆ ಬರಬಹುದು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನೂರಾರು ಜನರು ಇರುತ್ತಾರೆ. ಹಾಗಾಗಿ ನಾನು ರಾಮ ಮಂದಿರ ಭೂಮಿಪೂಜೆ ಕಾರ್ಯಕ್ರಮದಿಂದ ದೂರ ಉಳಿಯುವೆ. ನರೇಂದ್ರ ಮೋದಿ ಹಾಗೂ ಎಲ್ಲರೂ ಅಲ್ಲಿಂದ ಹೋದ ಬಳಿಕ ರಾಮ ಲಲ್ಲಾನ ದರ್ಶನ ಪಡೆಯುವೆ'' ಎಂದು ತಿಳಿಸಿದ್ದಾರೆ.
''ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶದ ಕೆಲ ನಾಯಕರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿರುವುದನ್ನು ನಾನು ಕೇಳಿದಾಗಿನಿಂದಲೂ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಸಮಾರಂಭದಲ್ಲಿ ಪಾಲ್ಗೊಳ್ಳುವವರ ಬಗ್ಗೆ ನನಗೆ ಚಿಂತೆಯುಂಟಾಗಿದೆ'' ಎಂದು ಹೇಳಿದ್ದಾರೆ.