ಬೆಂಗಳೂರು, ಆ 3(DaijiworldNews/HR): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ನಡುವೆಯೂ ಕಳೆದ ಒಂದು ವಾರದಲ್ಲಿ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಕೂಡಾ ಹೆಚ್ಚಳವಾಗಿದೆ.
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಆರೋಗ್ಯ ಸಚಿವ ಡಾ. ಸುಧಾಕರ್ ಕೆ ಅವರು, ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಕೊರೊನಾ ಚೇತರಿಕೆ ದರ ಶೇ.5.67%ರಷ್ಟು ಏರಿಕೆ ಕಂಡಿದ್ದು ಬೆಂಗಳೂರು ನಗರದಲ್ಲಿ ಶೇ.9.17%ರಷ್ಟು ಏರಿಕೆ ಕಂಡಿದೆ. ನೆನ್ನೆ ಸಂಜೆಯ ವೇಳೆಗೆ ರಾಜ್ಯದ ಚೇತರಿಕೆ ದರ ಶೇ.42 81% ರಷ್ಟಿದ್ದು ಬೆಂಗಳೂರಿನಲ್ಲಿ ಶೇ.35.14% ಚೇತರಿಕೆ ದರ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಹಾಗೆಯೇ ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ಹಾಗೂ ರಾಜ್ಯದಲ್ಲೇ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿರುವ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಚೇತರಿಕೆ ಪ್ರಮಾಣದ ಮಾಹಿತಿಯನ್ನು ಕೂಡಾ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಜುಲೈ 27 ರಂದು ಶೇ. 37.14 ರಷ್ಟಿದ್ದ ಚೇತರಿಕೆ ಪ್ರಮಾಣವು ಆಗಸ್ಟ್ 2 ರಂದು ಶೇ.42.81 ಕ್ಕೆ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಜುಲೈ 27 ರಂದು ಶೇ. 25.97 ರಷ್ಟಿದ್ದ ಚೇತರಿಕೆ ಪ್ರಮಾಣ ಒಂದು ವಾರದಲ್ಲಿ ಶೇ. ೩೫.೧೪ ಕ್ಕೆ ಏರಿಕೆಯಾಗಿದೆ.
ಭಾನುವಾರ ಒಂದೇ ದಿನದಲ್ಲಿ 4077 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಒಟ್ಟು ಚೇತರಿಕೆ ಪ್ರಮಾಣ 57,725 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು 1,34,819 ಜನರಲ್ಲಿ ಸೋಂಕು ದೃಢಪಟ್ಟಿದ್ದು ಈವರೆಗೆ 2,496 ಮಂದಿ ಸಾವನ್ನಪ್ಪಿದ್ದಾರೆ.