ನವದೆಹಲಿ, ಆ 3 (Daijiworld News/MSP): ಐತಿಹಾಸಿಕ ರಾಮಮಂದಿರದ ಭೂಮಿಪೂಜೆ ಅಮಂಗಳ ಘಳಿಗೆಯಲ್ಲಿ ನಡೆಯುತ್ತಿದ್ದು, ತಕ್ಷಣ ಆಗಸ್ಟ್ 5ರ ಭೂಮಿ ಪೂಜೆ ಮುಂದೂಡಬೇಕು ಎಂದು ಕಾಂಗ್ರೆಸ್ ಮುಖಂಡ ಮತ್ತು ರಾಜ್ಯಸಭಾ ಸಂಸದ ದಿಗ್ವಿಜಯ ಸಿಂಗ್, ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಗ್ರಹಿಸಿದ್ದಾರೆ.
"ಶ್ರೀರಾಮಮಂದಿರ ದೇವಸ್ಥಾನದ ಅಡಿಪಾಯ ಹಾಕುವ ಆಗಸ್ಟ್ 5ರ ದಿನಾಂಕ ಅಶುಭ ಘಳಿಗೆಯಿಂದ ಕೂಡಿದ್ದು, ಹೀಗಾಗಿ ಈ ಸಮಾರಂಭವನ್ನು ಮುಂದೂಡಬೇಕೆಂದು ನಾನು ಮೋದಿಯವರಲ್ಲಿ ವಿನಂತಿಸುತ್ತೇನೆ. ಶ್ರೀ ರಾಮ ಮಂದಿರ ನಿರ್ಮಾಣವು ನೂರಾರು ವರ್ಷಗಳ ಹೋರಾಟದ ಪ್ರತೀಕವಾಗಿದೆ. ಇದಕ್ಕಾಗಿಯಾದರೂ ಪ್ರಧಾನಿ ಮೋದಿ ಅವರು ತಮ್ಮ ಮೊಂಡುತನವನ್ನು ಬಿಡಬೇಕು. ಈ ಸಮಾರಂಭವನ್ನು ಮುಂದೂಡಬೇಕು. ಒಂದು ವೇಳೆ ಮುಂದುವರಿದರೆ ರಾಮಮಂದಿರ ನಿರ್ಮಾಣ ಪ್ರಕ್ರಿಯೆಯಲ್ಲಿ ನೂರಾರು ಅಡಚಣೆಗಳು ಬರಬಹುದು" ಎಂದು ದಿಗ್ವಿಜಯ ಸಿಂಗ್ ಅವರು ಟ್ವೀಟ್ ಮಾಡಿದ್ದಾರೆ.
ಮಾತ್ರವಲ್ಲದೆ " ಸನಾತನ ಧರ್ಮದ ಸಂಪ್ರದಾಯಗಳನ್ನು ಕಡೆಗಣಿಸಿದ ಪರಿಣಾಮವಾಗಿ ಹಲವಾರು ಬಿಜೆಪಿ ನಾಯಕರು ಕೊರೊನಾದಿಂದ ಈಗಾಗಲೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ರಾಮ್ ದೇವಾಲಯದ ಪುರೋಹಿತರು ಕೊರೊನಾ ಸೋಂಕು ಪೀಡಿತರಾಗಿದ್ದಾರೆ. ಕರೊನಾದ ಕಾರಣದಿಂದಲೇ ಉತ್ತರ ಪ್ರದೇಶದ ಸಚಿವೆ ಕಮಲ್ ರಾಣಿ ವರುಣ್ ಅವರ ಸಾವು, ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥ, ಗೃಹ ಸಚಿವ ಅಮಿತ್ ಶಾ ,ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾನ್ ,ಕರ್ನಾಟಕ ಸಿಎಂ ಯಡಿಯುರಪ್ಪ ಅವರಿಗೂ ಸೋಂಕು ತಗುಲಿರುವುದು ಇದಕ್ಕೆ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.
ಶ್ರೀರಾಮಮಂದಿರಕ್ಕೆ ಅಶುಭ ಘಳಿಗೆಯಲ್ಲಿ ಅಡಿಪಾಯ ಹಾಕುವ ಮೂಲಕ, ನೀವು ಎಷ್ಟು ಜನರನ್ನು ಆಸ್ಪತ್ರೆಗೆ ಕಳುಹಿಸಲು ಬಯಸುತ್ತೀರಿ ಮೋದಿಯವರೇ? ಕೇವಲ ಜನ ಸಾಮಾನ್ಯ ಜನರು ಮಾತ್ರ ಗೃಹಬಂಧನದಲ್ಲಿರಬೇಕೆ, ಉತ್ತರ ಪ್ರದೇಶ ಮುಖ್ಯಮಂತ್ರಿ, ಪ್ರಧಾನಿಗೆ ಈ ನಿಯಮ ಅನ್ವಯಿಸುವುದಿಲ್ಲವೇ ? ಮುಖ್ಯಮಂತ್ರಿ ಯೋಗಿ ಅವರೇ ಭೂಮಿ ಪೂಜೆಯನ್ನು ಮುಂದೂಡುವಂತೆ, ಪ್ರಧಾನಿ ಮನವೊಲಿಸಲು ಪ್ರಯತ್ನ ಮಾಡಿ. ಶ್ರೀ ರಾಮ ಕೋಟ್ಯಾಂತರ ಹಿಂದೂಗಳ ನಂಬಿಕೆ. ಪ್ರಧಾನ ಮಂತ್ರಿ ಸಾವಿರಾರು ವರ್ಷಗಳಿಂದ ಸ್ಥಾಪಿಸಲಾದ ಸನಾತನ ಧರ್ಮದ ನಿಯಮ ಮತ್ತು ಸಂಪ್ರದಾಯಗಳೊಂದಿಗೆ ಆಟವಾಡಬಾರದು ಎಂದು ಹೇಳಿದ್ದಾರೆ.