ಬೆಂಗಳೂರು, ಆ 03 (DaijiworldNews/PY): ಕೊರೊನಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರು ತಮ್ಮ ಆರೋಗ್ಯದ ಬಗ್ಗೆ ತಾವೇ ಸ್ವತಃ ನಾಡಿನ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಮಣಿಪಾಲ ಆಸ್ಪತ್ರೆಯಿಂದ ಸಿಎಂ ಬಿಎಸ್ವೈ ಅವರು ವಿಡಿಯೋ ಮಾಡಿದ್ದು, ಜನತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸೋಂಕು ಹರಡದಂತೆ ತಡೆಯಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಆ.2 ರ ಭಾನುವಾರ ರಾತ್ರಿ ಸುಮಾರು 9 ಗಂಟೆಯ ವೇಳೆ ನನಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ತಿಳಿದ ತಕ್ಷಣ ನಾನು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ವೈದ್ಯರು ತಪಾಸಣೆ ಮಾಡಿ ಯಾವುದೇ ತೊಂದರೆಗಳಿಲ್ಲ. ಕೂಡಲೇ ಗುಣಮುಖರಾಗುತ್ತೀರಿ ಎಂದು ಹೇಳಿದ್ದಾರೆ. ಈಗಾಗಲೇ ಕೇಂದ್ರದ ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಪ್ರಧಾನಿ ದೇವೇಗೌಡ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಠಾಧಿಪತಿಗಳು ಬೇಗ ಗುಣಮುಖರಾಗುವಂತೆ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದ್ದಾರೆ
ಸರ್ಕಾರಿ ಕಚೇರಿ ಕೆಲಸಗಳಿಗೆ ಯಾವುದೇ ಅಡ್ಡಿ ಆಗಬಾರದು ಎನ್ನುವ ಕಾರಣದಿಂದ ನಾನು ನಿನ್ನೆಯಿಂದಲೇ ನಮ್ಮ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಅಲ್ಲದೇ ಇಂದು ಬೆಳಗ್ಗೆ ಕೂಡಾ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಯಾರೂ ಆತಂಕಕ್ಕೊಳಗಾಗುವ ಅಗತ್ಯ ಇಲ್ಲ. ಆದಷ್ಟು ಬೇಗ ನಾನು ಗುಣಮುಖನಾಗಿ ಹೊರಬಂದು ನನ್ನ ಕೆಲಸ-ಕಾರ್ಯಗಳಲ್ಲಿ ತೊಡಗುತ್ತೇನೆ. ನಿಮ್ಮೆಲ್ಲರ ಆರ್ಶೀರ್ವಾದ, ಬೆಂಬಲ ಸದಾ ನನ್ನ ಮೇಲಿರಲಿ. ನಾಡಿನ ಆರೂವರೆ ಕೋಟಿ ಜನರ ಆರೋಗ್ಯ ಬಹಳ ಮುಖ್ಯ. ದಯವಿಟ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ. ಇದರಿಂದಾಗಿ ನಾವು ಗುಣಮುಖರಾಗಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಸೋಂಕು ತಗುಲಿರುವುದನ್ನು ದೃಡಪಡಿಸಿದ್ದ ಬಿಎಸ್ವೈ ಅವರು, ನನ್ನ ಕೊರೊನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದೆ. ರೋಗಲಕ್ಷಣಗಳು ಇಲ್ಲದಿದ್ದರೂ ಮುನ್ನೆಚ್ಚರಿಕೆಯ ಕ್ರಮವಾಗಿ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು, ಕ್ವಾರಂಟೈನ್ನಲ್ಲಿದ್ದು ಮುಂಜಾಗ್ರತೆ ವಹಿಸಿ ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದರು.
ಸಿಎಂ ಬಿಎಸ್ವೈ ಅವರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ, ಸಿಎಂ ಅವರ ಕಾವೇರಿ ಮತ್ತು ಕೃಷ್ಣಾ ನಿವಾಸಗಳ ಎಲ್ಲಾ ಸಿಬ್ಬಂದಿಗಳಿಗೂ ಕೊರೊನಾ ತಪಾಸಣೆ ಮಾಡಲಾಗುತ್ತಿದ್ದು, ಕಾವೇರಿ ನಿವಾಸದ ಆರು ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಅಲ್ಲದೇ ಬಿಎಸ್ವೈ ಅವರ ಪುತ್ರಿ ಪದ್ಮಾವತಿ ಅವರಿಗೂ ಸೋಂಕು ದೃಢಪಟ್ಟಿದೆ.