ಬೆಂಗಳೂರು, ಆ. 03 (DaijiworldNews/MB) : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆ ರಾಜ್ಯಪಾಲ ಡಾ. ವಜುಭಾಯ್ ವಾಲಾ ಅವರು ಕೂಡಾ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದು ವರದಿ ನೆಗೆಟಿವ್ ಆಗಿದೆ. ಹಾಗೆಯೇ ಬಿಎಸ್ವೈ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ನಿಟ್ಟಿನಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಮಾಡಿಸಿಕೊಂಡಿದ್ದು ವರದಿ ನೆಗೆಟಿವ್ ಆಗಿದೆ.
ಭಾನುವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು ಪುತ್ರಿ ಪದ್ಮಾವತಿ ಅವರಿಗೆ ಪಾಸಿಟಿವ್ ಆಗಿದೆ. ಪುತ್ರ ವಿಜಯೇಂದ್ರ ಅವರಿಗೆ ನೆಗೆಟಿವ್ ಬಂದಿತ್ತು. ಸಿಎಂ ಅವರ ಕಾವೇರಿ ಮತ್ತು ಕೃಷ್ಣಾ ನಿವಾಸಗಳ ಎಲ್ಲಾ ಸಿಬ್ಬಂದಿಗಳಿಗೂ ಕೊರೊನಾ ತಪಾಸಣೆ ಮಾಡಲಾಗುತ್ತಿದ್ದು, ಕಾವೇರಿ ನಿವಾಸದ ಆರು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸರ್ಕಾರಿ ನಿವಾಸ ಕಾವೇರಿ ಹಾಗೂ ಗೃಹ ಕಚೇರಿ ಕೃಷ್ಣಾವನ್ನೂ ಸೀಲ್ಡೌನ್ ಮಾಡಲಾಗಿದೆ. ಮುಂದಿನ ಮೂರು ದಿನಗಳು ಯಾರಿಗೂ ಪ್ರವೇಶಕ್ಕೆ ಅವಕಾಶ ನೀಡದಂತೆ ಆದೇಶ ನೀಡಲಾಗಿದೆ. ಹಾಗೆಯೇ ವಿಧಾನಸೌಧದ ಸಿಎಂ ಕಚೇರಿಯನ್ನು ಸೀಲ್ಡೌನ್ ಮಾಡಲಾಗಿದೆ.
ಕಳೆದ ಶುಕ್ರವಾರ ಬಿಎಸ್ವೈ ಅವರು ರಾಜ್ಯಪಾಲರನ್ನು ಭೇಟಿಯಾಗಿದ್ದು ಈ ಕಾರಣದಿಂದಾಗಿ ರಾಜ್ಯಪಾಲ ವಜೂಭಾಯ್ ವಾಲಾ, ಅವರ ಆಪ್ತ ಸಹಾಯಕ ಹಾಗೂ ಏಡ್ ಡಿ ಕ್ಯಾಮ್(ಎಡಿಸಿ) ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಮೂವರ ವರದಿಯೂ ಕೂಡಾ ನೆಗೆಟಿವ್ ಆಗಿದೆ.
ಇನ್ನು ಬಿಎಸ್ವೈಗೆ ಕೊರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಕಂದಾಯ ಸಚಿವ ಆರ್.ಅಶೋಕ್ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಕಳೆದ ಗುರುವಾರ ಸಚಿವರು, ಯಡಿಯೂರಪ್ಪ ಜೊತೆಗೆ ಶಿವಾಜಿನಗರದಲ್ಲಿ ಮೆಟ್ರೋ ಯೋಜನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರಣದಿಂದ ಸ್ವಯಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ.