ಅಯೋಧ್ಯೆ, ಆ 3(DaijiworldNews/HR): ಐತಿಹಾಸಿಕ ರಾಮಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ ಶುರುವಾಗಿದ್ದು, ಆಗಸ್ಟ್ 5ರಂದು ನಡೆಯುವ ಭೂಮಿ ಪೂಜೆಯ ಮೊದಲ ಆಮಂತ್ರಣ ಪತ್ರವನ್ನು ಅಯೋಧ್ಯೆ ಭೂ ವಿವಾದ ಪ್ರಕರಣದ ದಾವೆದಾರರಲ್ಲಿ ಒಬ್ಬರಾದ ಇಕ್ಬಾಲ್ ಅನ್ಸಾರಿ ಆಹ್ವಾನ ಸ್ವೀಕರಿಸಿದರು.
ಆಹ್ವಾನ ಸ್ವೀಕರಿಸಿ ಬಳಿಕ ಮಾತನಾಡಿದ ಅವರು, ನಾನು ಮೊದಲ ಆಹ್ವಾನವನ್ನು ಸ್ವೀಕರಿಸಬೇಕೆಂಬುದು ಭಗವಾನ್ ರಾಮನ ಆಶಯವಾಗಿತ್ತು ಎಂದು ನಾನು ನಂಬುತ್ತೇನೆ. ದೇವಾಲಯವನ್ನು ಯಾವಾಗ ನಿರ್ಮಿಸಲಾಗುತ್ತದೆಯೋ, ಆಗ ಅಯೋಧ್ಯೆಯ ಭವಿಷ್ಯವೂ ಬದಲಾಗುತ್ತದೆ. ಅಯೋಧ್ಯೆ ಹೆಚ್ಚು ಸುಂದರವಾಗಲಿದೆ ಮತ್ತು ಭವಿಷ್ಯದಲ್ಲಿ ವಿಶ್ವದಾದ್ಯಂತದ ಯಾತ್ರಾರ್ಥಿಗಳು ಪಟ್ಟಣಕ್ಕೆ ಭೇಟಿ ನೀಡುವುದರಿಂದ ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳು ದೊರಕಲಿದೆ.
ಅಯೋಧ್ಯೆಯ ಜನರು ಗಂಗಾ-ಯಮುನಿ ನಾಗರಿಕತೆಯನ್ನು ಅನುಸರಿಸುತ್ತಾರೆ ಮತ್ತು ಯಾರ ನಡುವೆ ಯಾವುದೇ ಕೆಟ್ಟ ಭಾವನೆ ಇಲ್ಲ ಎಂದು ಅನ್ಸಾರಿ ಹೇಳಿದರು.
ಅಯೋಧ್ಯೆಯಲ್ಲಿ ಪ್ರತಿಯೊಂದು ಧರ್ಮದ ಮತ್ತು ಪ್ರತಿಯೊಂದು ಪಂಥದ ದೇವ-ದೇವತೆಗಳಿದ್ದಾರೆ. ಇದು ಸಂತರ ಭೂಮಿಯಾಗಿದ್ದು, ಇಲ್ಲಿ ರಾಮ ಮಂದಿರವನ್ನು ನಿರ್ಮಿಸಲಾಗುತ್ತಿರುವುದು ಸಂತೋಷವಾಗಿದೆ ಎಂದು ಅವರು ಹೇಳಿದರು.