ದಾಂತೇವಾಡ, ಆ. 03 (DaijiworldNews/MB) : ರಕ್ಷಾ ಬಂಧನದ ದಿನವಾದ ಸೋಮವಾರ ತನ್ನ ಸೋದರಿ ಕಾಡಿಗೆ ವಾಪಸ್ ಹೋಗದಂತೆ ಮನವಿ ಮಾಡಿ ಪೊಲೀಸರಿಗೆ ಶರಣಾಗುವಂತೆ ತಿಳಿಸಿದ್ದು ಸಹೋದರಿಯ ಮನವಿಯಂತೆ ನಕ್ಸಲ್ ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾದ ಘಟನೆ ದಂತವಾಡ ಜಿಲ್ಲೆಯ ಪಾಲ್ನಾರ್ ಹಳ್ಳಿಯಲ್ಲಿ ನಡೆದಿದೆ.
ಮಲ್ಲ ಶರಣಾದ ನಕ್ಸಲ್ ಆಗಿದ್ದು ಈತನ ತಲೆಗೆ 8 ಲಕ್ಷ ರೂ. ಇನಾಮು ಘೋಷಿಸಲಾಗಿತ್ತು. ಈತ 12ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೋಗಿ ನಕ್ಸಲ್ ಗುಂಪಿಗೆ ಸೇರಿದ್ದು ಸುಮಾರು 14 ವರ್ಷದ ಬಳಿಕ ಮನೆಗೆ ವಾಪಾಸ್ ಬಂದಿದ್ದಾನೆ. ರಕ್ಷಾ ಬಂಧನದ ದಿನವಾದ ಸೋಮವಾರ ತನ್ನ ತಂಗಿಯನ್ನು ನೋಡಲೆಂದೇ ಇಂದು ಮನೆಗೆ ವಾಪಾಸ್ ಬಂದಿದ್ದು ತನ್ನ ತಂಗಿಯ ಮನವಿಯಂತೆ ಪೊಲೀಸರಿಗೆ ಶರಣಾಗಿದ್ದಾನೆ.
ಈ ಬಗ್ಗೆ ಮಾಹಿತಿ ನೀಡಿರುವ ಎಸ್ಪಿ ಅಭಿಷೇಕ್ ಪಲ್ಲವ್, ಮಲ್ಲ ಬೈರಾಂಘಢ ಪ್ರದೇಶದಲ್ಲಿ ಈವರೆಗೂ ನಕ್ಸಲ್ ತುಕಡಿಯ ಕಮಾಂಡರ್ ಆಗಿದ್ದು ಪೊಲೀಸರ ಹತ್ಯೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ವಾಂಟೆಡ್ ಆಗಿದ್ದ. ಈತನೀಗ ನಕ್ಸಲರಿಗೆ ಸರ್ಕಾರ ಘೋಷಿಸಿರುವ ಪರಿಹಾರ ಯೋಜನೆಯಡಿಯಲ್ಲಿ ಶರಣಾಗಿದ್ದಾನೆ ಎಂದು ತಿಳಿಸಿದ್ದಾರೆ.