ಬೆಂಗಳೂರು, ಆ. 04 (DaijiworldNews/MB) : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು ಹಲವು ಗಣ್ಯರು ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು, ''ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ವಿಚಾರ ತಿಳಿಯಿತು. ಅವರು ಶೀಘ್ರವಾಗಿ ಗುಣಮುಖರಾಗಿ ಜನರ ಸೇವೆಯಲ್ಲಿ ತೊಡಗುವಂತಾಗಲಿ ಎಂದು ಹಾರೈಸುತ್ತೇನೆ'' ಎಂದು ಹೇಳಿದ್ದಾರೆ.
''ಮಾನ್ಯ ಮಾಜಿ ಸಿಎಂ ಮತ್ತು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಗೆ ಕೊರೋನಾ ಪಾಸಿಟಿವ್ ಸುದ್ದಿ ಕೇಳಿ ಮನಸ್ಸಿಗೆ ಆಘಾತವಾಗಿದೆ. ವಿರೋಧ ಪಕ್ಷದ ನಾಯಕರಾಗಿ ರಚನಾತ್ಮಕ ಕಾರ್ಯಗಳಿಂದ ಸದಾ ಕ್ರಿಯಾಶೀಲರಾಗಿರುವ ಮಾನ್ಯ ಸಿದ್ದರಾಮಯ್ಯ ಅವರು ಆದಷ್ಟು ಬೇಗ ಕೋವಿಡ್ನಿಂದ ಗುಣಮುಖರಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ'' ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.
ಇನ್ನು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಟ್ವೀಟ್ ಮಾಡಿದ್ದು, ''ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕೊರೋನಾ ಸೋಂಕು ತಗುಲಿರುವ ವಿಷಯ ಕೇಳಿ ಮನಸ್ಸಿಗೆ ಘಾಸಿಯಾಯಿತು. ಶೀಘ್ರ ಗುಣಮುಖರಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಸಾರ್ವಜನಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಜನಪ್ರತಿನಿಧಿಗಳು ಅತಿಹೆಚ್ಚಿನ ಮುಂಜಾಗ್ರತ ಕ್ರಮಗಳನ್ನು ಚಾಚೂ ತಪ್ಪದೆ ಪಾಲಿಸುವಂತೆ ಮನವಿ ಮಾಡುತ್ತೇನೆ'' ಎಂದಿದ್ದಾರೆ.
''ಕೊರೋನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಂಡು, ಶಿಸ್ತುಬದ್ಧ ಜೀವನ ಅಳವಡಿಸಿಕೊಳ್ಳುವ ಮೂಲಕ ಅಮೂಲ್ಯವಾದ ಜೀವ ಮತ್ತು ಜೀವನವನ್ನು ರಕ್ಷಿಸಿಕೊಳ್ಳಬೇಕು ಎಂದು ವಿನಮ್ರವಾಗಿ ಮನವಿ ಮಾಡುತ್ತೇನೆ'' ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಸಿದ್ದರಾಮಯ್ಯ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿ, ''ಬೇಗ ಗುಣಮುಖರಾಗಿ ಬನ್ನಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ'' ಎಂದು ಹಾರೈಸಿದ್ದಾರೆ.