ಬೆಂಗಳೂರು, ಆ. 04 (DaijiworldNews/MB) : ಕೊರೊನಾ ಸೋಂಕು ಏರಿಕೆಯಾಗುತ್ತಿರುವ ನಿಟ್ಟಿನಲ್ಲಿ ಸೋಂಕು ಸಂಪರ್ಕಗಳನ್ನು ಪತ್ತೆ ಹಚ್ಚಲು ಬಳಸಲಾಗುವ ಆರೋಗ್ಯ ಸೇತು ಮೊಬೈಲ್ ಆ್ಯಪ್ ಡೌನ್ಲೋಡ್ ಹಾಗೂ ಬಳಕೆ ಕಡ್ಡಾಯವೇ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ಸೂಚಿಸಿದೆ.
ಅನಿವರ್ ಎ. ಅರವಿಂದ್ ಎಂಬುವವರು ಹಲವು ಸೇವೆಗಳಿಗೆ ಆ್ಯಪ್ ಬಳಕೆ ಕಡ್ಡಾಯ ಮಾಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದು ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರಿದ್ದ ವಿಭಾಗೀಯ ಪೀಠ ಆರೋಗ್ಯ ಸೇತು ಮೊಬೈಲ್ ಆ್ಯಪ್ ಡೌನ್ಲೋಡ್ ಹಾಗೂ ಬಳಕೆ ಕಡ್ಡಾಯವೇ ಎಂದು ರಾಜ್ಯ ಸರ್ಕಾರಗಳು ಸ್ಪಷ್ಟನೆ ನೀಡಬೇಕು ಎಂದು ಸೂಚಿಸಿದೆ.
ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು, ವಿಮಾನ ಪ್ರಯಾಣಕ್ಕೆ ಈ ಆಪ್ನ್ನು ಡೌನ್ಲೋಡ್ ಕಡ್ಡಾಯವೆಂದು ಜು.30 ರಂದು ಎಲ್ಲಾ ವಿಮಾನ ನಿಲ್ದಾಣಗಳಿಗೆ ಎಎಐ ನಿರ್ದೇಶನ ನೀಡಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್, ಇದು ಪ್ರಯಾಣಿಕರಿಗೆ ನೀಡುರುವ ಸಲಹೆ ಮಾತ್ರವಾಗಿದ್ದು ಸೋಂಕು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಸ್ವಯಂ ಪ್ರೇರಿತವಾಗಿ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಲು ಅವರಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಅರ್ಜಿದಾರರು ಮೆಟ್ರೋ ರೈಲು ಪ್ರಯಾಣಿಕರೂ ಕೂಡ ಪ್ರಯಾಣದ ವೇಳೆ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕೆಂದು ಬಿಎಂಆರ್ಸಿಎಲ್ ಸೂಚನೆ ನೀಡಿದ್ದು ಯಾವುದೇ ಕಾನೂನು ಕೂಡಾ ಒಂದು ಆ್ಯಪ್ ಕಡ್ಡಾಯಗೊಳಿಸಲು ಅನುಮತಿ ನೀಡುವುದಿಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನ್ಯಾಯಪೀಠ, ಆ್ಯಪ್ ಬಳಕೆ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ ಈ ಬಗ್ಗೆ ರಾಜ್ಯ ಸರ್ಕಾರಗಳ ನಿಲುವು ಏನು? ಈ ಸಂಬಂಧ ರಾಜ್ಯದ 5 ವಿಮಾನ ನಿಲ್ದಾಣಗಳಿಗೆ ರಾಜ್ಯ ಸರ್ಕಾರ ಸೂಚನೆಗಳನ್ನೇನಾದರೂ ಹೊರಡಿಸಿದದೆಯೇ? ಈ ಬಗ್ಗೆ ರಾಜ್ಯ ಸರ್ಕಾರ ವಿವರಣೆ ನೀಡಬೇಕು ಎಂದು ತಿಳಿಸಿದೆ.