ಲಖನೌ, ಆ 04(DaijiworldNews/HR): ನಾಳೆ ಭಾರತಕ್ಕೆ ಐತಿಹಾಸಿಕ ದಿನವಾಗಿದ್ದು, ಹಲವಾರು ವರ್ಷಗಳ ಕನಸು ನನಸಾಗುತ್ತಿದೆ. ಇದೀಗ ನಾಳೆ ನಡೆಯುವ ರಾಮ ಮಂದಿರ ಭೂಮಿ ಪೂಜೆಗೆ ಪ್ರಧಾನಿ ನರೇಂದ್ರ ಮೋದಿ ಅವರು 3 ಗಂಟೆಗಳ ಕಾಲ ಇರಲಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಮೋದಿ ನಾಳೆ ಬೆಳಗ್ಗೆ ವಿಮಾನದಲ್ಲಿ ಆಗಮಿಸಲಿದ್ದು, ಅವರ ಜತೆಗೆ ಕೆಲವು ಹಿರಿಯ ನಾಯಕರೂ ಪಾಲ್ಗೊಳ್ಳಲಿದ್ದಾರೆ.
ರಾಮ ಜನ್ಮಭೂಮಿಯ ತೀರ್ಥ ಕ್ಷೇತ್ರದ ಶಿಲಾನ್ಯಾಸ ಕಾರ್ಯಕ್ರಮಕ್ಕೆ 175 ಅತಿಥಿಗಳನ್ನು ಆಹ್ವಾನಿಸಲಾಗಿದ್ದು, ಅದರಲ್ಲಿ 135 ಧಾರ್ಮಿಕ ಗುರುಗಳು ಇದ್ದಾರೆ.
ಮೋದಿ ಅವರ ಪ್ರವಾಸ ಪಟ್ಟಿಯ ಪ್ರಕಾರ, ಆಗಸ್ಟ್ 5ರಂದು ಬೆಳಗ್ಗೆ 9.30ಕ್ಕೆ ವಿಶೇಷ ವಿಮಾನದ ಮೂಲಕ ಲಖನೌಗೆ ಆಗಮಿಸಲಿರುವ ಮೋದಿ ಅಲ್ಲಿಂದ ಹೆಲಿಕಾಫ್ಟರ್ ಮೂಲಕ ಅಯೋಧ್ಯೆಗೆ ತೆರಳಲಿದ್ದಾರೆ. ಅಯೋಧ್ಯೆಗೆ ಅವರು ಬೆಳಗ್ಗೆ 11.30ಕ್ಕೆ ತಲುಪುವ ನಿರೀಕ್ಷೆ ಇದ್ದು, ಮೊದಲು ಹನುಮಗಡಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನಂತರ ರಾಮಜನ್ಮಭೂಮಿ ಸ್ಥಳಕ್ಕೆ ತಲುಪಿ ಅಲ್ಲಿ ಭೂಮಿ ಪೂಜೆಯಲ್ಲಿ ಭಾಗಿಯಾಗುತ್ತಾರೆ.
ಮಧ್ಯಾಹ್ನ 12.40ಕ್ಕೆ ಶ್ರೀರಾಮಮಂದಿರಕ್ಕೆ ಶಿಲಾನ್ಯಾಸ ನಡೆಯಲಿದ್ದು, ಅದರಲ್ಲಿ ಭಾಗಿಯಾದ ನಂತರ 2 ಗಂಟೆ ಸುಮಾರಿಗೆ ಅಯೋಧ್ಯೆಯಿಂದ ಲಖನೌಗೆ ಹೆಲಿಕಾಫ್ಟರ್ ಮೂಲಕ ಹಿಂದಿರುಗಲಿದ್ದು, ಅಲ್ಲಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ವಾಪಸಾಗಲಿದ್ದಾರೆ.