ಪಾಟ್ನ, ಆ 04(DaijiworldNews/HR):ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮಂಗಳವಾರ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ಪ್ರಕರಣದ ತನಿಖೆಗೆ ಸಿಬಿಐಗೆ ಶಿಫಾರಸು ಮಾಡಿದ್ದಾರೆ.
ಸುಶಾಂತ್ ಸಿಂಗ್ ಅವರ ತಂದೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಕೆಲವೇ ಗಂಟೆಗಳ ಬಳಿಕ ಬಿಹಾರ ಸರ್ಕಾರ ಮಹತ್ವ ನಿರ್ಧಾರ ಕೈಗೊಂಡಿದೆ.
ಸುಶಾಂತ್ ಆತ್ಮಹತ್ಯೆ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದರು. ಈಗಾಗಲೇ ಸುಶಾಂತ್ ಸಾವಿನ ಕುರಿತಂತೆ ಮುಂಬೈ ಹಾಗೂ ಮಹಾರಾಷ್ಟ್ರ ಪೊಲಿಸರು ತನಿಖೆ ನಡೆಸುತ್ತಿದ್ದಾರೆ.
ಸುಶಾಂತ್ ಸಿಂಗ್ ಅವರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಲಾಗಿದೆ ಎಂದು ಸುಶಾಂತ್ ಅವರ ತಂದೆ ದೂರು ನೀಡಿದ ಕಾರಣ, ತನಿಖೆಗಾಗಿ ಪಾಟ್ನದ ಪೂರ್ವ ವಿಭಾಗದ ಎಸ್ ಪಿ ವಿನಯ್ ತಿವಾ ಮುಂಬೈಗೆ ತೆರಳಿದ್ದರು. ಈ ವೇಳೆ ಕೊರೋನಾ ವೈರಸ್ ಕಾರಣ ಹೊರರಾಜ್ಯದವರು ಕ್ವಾರಂಟೈನ್ ಆಗಬೇಕು ಎಂಬ ನಿಮಯ ಇರುವ ಹಿನ್ನೆಲೆಯಲ್ಲಿ ಆಗಸ್ಟ್ 15ರವರೆಗೆ ಅವರನ್ನು ಕ್ವಾರಂಟೈನ್ ಗೊಳಪಡಿಸಲಾಗಿದೆ. ಅವರ ಕೈ ಮೇಲೆ ಕ್ವಾರಂಟೈನ್ ಸೀಲ್ ಕೂಡ ಹಾಕಲಾಗಿತ್ತು. ಇದಕ್ಕೆ ಬಿಹಾರ ರಾಜ್ಯ ಮುಖ್ಯಮಂತ್ರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಮಹಾರಾಷ್ಟ್ರ ಸರ್ಕಾರದ ಕ್ರಮ ಸೂಕ್ತವಾದುದಲ್ಲ. ಹೀಗಾಗಿ ಈ ಬಗ್ಗೆ ಬಿಹಾರ ಡಿಜಿಪಿ ಅವರು ಮಹಾರಾಷ್ಟ್ರ ಡಿಜಿಪಿ ಜೊತೆಗೆ ಮಾತನಾಡಲಿ ಎಂದಿದ್ದಾರೆ.
ಇದೀಗ ಸುಶಾಂತ್ ಅವರ ತಂದೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದ್ದರು. ಈ ಆಗ್ರಹಕ್ಕೆ ಮಣಿದ ಬಿಹಾರ ರಾಜ್ಯ ಮುಖ್ಯಮಂತ್ರಿಗಳು ಇದೀಗ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದಾರೆ.