ಹುಬ್ಬಳ್ಳಿ, ಆ. 04 (DaijiworldNews/MB) : ''ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ರಾಜೀ ರಾಜಕಾರಣಕ್ಕೆ ಒತ್ತು ಕೊಟ್ಟುಆಡಳಿತದ ನಿಯಂತ್ರಣ ಕಳೆದುಕೊಂಡಿದ್ದಾರೆ'' ಎಂದು ಶಾಸಕ ಆರ್.ವಿ. ದೇಶಪಾಂಡೆ ಟೀಕೆ ಮಾಡಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ಬಿಎಸ್ವೈ ಶಾಸಕರಾಗಿದ್ದಾಗ, ವಿರೋಧ ಪಕ್ಷದ ನಾಯಕರಾಗಿದ್ದಾಗ ಪ್ರಭಾವಿ ನಾಯಕರಾಗಿದ್ದರು. ಆದರೆ ಮುಖ್ಯಮಂತ್ರಿಯಾದ ಬಳಿಕ ರಾಜೀ ರಾಜಕಾರಣಕ್ಕೆ ಒತ್ತು ಕೊಟ್ಟುಆಡಳಿತದ ನಿಯಂತ್ರಣ ಕಳೆದುಕೊಂಡಿದ್ದಾರೆ. ಶಾಸಕರು ಹಾಗೂ ಸಚಿವರ ಮಾತಿಗೆ ಮಣಿಯುತ್ತಿದ್ದಾರೆ. ಇದರಿಂದಾಗಿ ಆಡಳಿತ ಹಳಿ ತಪ್ಪಿದೆ'' ಎಂದು ಹೇಳಿದರು.
''ಲಾಕ್ಡೌನ್ ಆರಂಭದ ಸಂದರ್ಭದಲ್ಲಿ ಕೊರೊನಾವನ್ನು ಎದುರಿಸುವ ಸಿದ್ದತೆಯನ್ನೇ ರಾಜ್ಯ ಸರ್ಕಾರ ಮಾಡಿಕೊಂಡಿರಲಿಲ್ಲ. ಕೊರೊನಾ ವಾರಿಯರ್ಸ್ಗಳಿಗೆ ಬೇಕಾದ ಸುರಕ್ಷತೆಯ ಕ್ರಮಗಳನ್ನು ಕೈಗೊಂಡಿಲ್ಲ. ವಲಸೆ ಕಾರ್ಮಿಕರ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿಲ್ಲ'' ಎಂದು ದೂರಿದರು.
''ಸರ್ಕಾರವು ಶಾಸಕರುಗಳ ಮುಖೇನವಾಗಿ ಲಕ್ಷಾಂತರ ಕಿಟ್ಗಳನ್ನು ನೀಡಲಾಗಿದೆ ಎಂದು ಹೇಳಿದೆ. ಆದರೆ ಈಗ ಈ ಕಿಟ್ಗಳ್ನು ಯಾರಿಗೆ, ಯಾವಾಗ ನೀಡಲಾಗಿದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಬೇಕು. ಸರ್ಕಾರೇತರ ಸಂಸ್ಥೆಗಳು ಕೂಡ ಸರ್ಕಾರಕ್ಕೆ ಕಿಟ್ ನೀಡಿದೆ. ಎಲ್ಲದರ ವಿವರ ನೀಡಿ'' ಎಂದು ಆಗ್ರಹಿಸಿದರು.
''ಏಷ್ಯಾದ ಅತಿ ದೊಡ್ಡ ಕೊಳೆಗೇರಿ ಮುಂಬೈನ ಧಾರಾವಿಯಲ್ಲಿ ಈಗ ಸೋಂಕಿತರ ಸಂಖ್ಯೆ 72ಕ್ಕೆ ಇಳಿದಿದೆ. ಇದಕ್ಕೆ ಕಾರಣರಾದ ಅಲ್ಲಿನ ಅಧಿಕಾರಿಗಳ ಕಾರ್ಯವೈಖರಿ ರಾಜ್ಯಕ್ಕೆ ಮಾದರಿಯಾಗಬೇಕಿತ್ತು. ರಾಜ್ಯ ಸರ್ಕಾರ ಪದೇ ಪದೇ ಅಧಿಕಾರಿಗಳ ವರ್ಗಾವಣೆ, ಕೋವಿಡ್ ಉಸ್ತುವಾರಿಗಳನ್ನೂ ಪದೇ ಪದೇ ಬದಲಿಸಿ ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ'' ಎಂದು ಆರೋಪಿಸಿದರು.
''ನಮ್ಮ ಪಕ್ಷದ ಮುಖಂಡರು ಕೊರೊನಾ ಪರಿಕರಗಳ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ನೊಟೀಸ್ ನೀಡಿದ್ದಾರೆ. ವಿರೋಧ ಪಕ್ಷದವರಾಗಿರುವ ನಾವು ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ಕ್ರಮವನ್ನು ಪ್ರಶ್ನಿಸುವುದೇ ತಪ್ಪಾ?'' ಎಂದು ಪ್ರಶ್ನಿಸಿದ ಅವರು ''ಇಷ್ಟಕ್ಕೆ ನೊಟೀಸ್ ನೀಡುವುದಾದರೆ ರಾಜ್ಯ ಸರ್ಕಾರದ ವಿರುದ್ದ ವರದಿ ಮಾಡುವ ಮಾಧ್ಯಮ, ಪತ್ರಿಕೆಗಳಿಗೆ ನೊಟೀಸ್ ನೀಡಿದರು ಯಾವುದೇ ಆಶ್ಚರ್ಯವಿಲ್ಲ'' ಎಂದು ಹೇಳಿದರು.