ನವದೆಹಲಿ, ಆ. 04 (DaijiworldNews/MB) : ಬುಧವಾರ ಭವ್ಯ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ನಡೆಯಲಿದ್ದು ಈ ನಡುವೆ ಸರ್ಕಾರ ದೇಗುಲದ ಹೊರ ರಚನೆಯ ನೀಲನಕ್ಷೆ ಬಿಡುಗಡೆ ಮಾಡಿದೆ.
ಈ ಚಿತ್ರದಲ್ಲಿ ಗೋಪುರಗಳು, ಕಂಬಗಳು ಮತ್ತು ಗುಮ್ಮಟಗಳನ್ನು ಒಳಗೊಂಡಿರುವ ಮೂರು ಅಂತಸ್ತು ಇರುವ ಭವ್ಯವಾದ ರಚನೆಯನ್ನು ತೋರಿಸಲಾಗಿದೆ.
ಭೂ ವ್ಯಾಜ್ಯ ಪ್ರಕರಣದಲ್ಲಿ ನವೆಂಬರ್ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ದೇಗುಲದ ಮೂಲ ಯೋಜನೆಯನ್ನು ಬದಲಿಸಿ ಹೊಸ ಯೋಜನೆ ಸಿದ್ಧಪಡಿಸಲಾಗಿದೆ ಎಂದು ವರದಿಯಾಗಿದೆ.
''ಈ ಮೊದಲು ಸುಮಾರು 141 ಅಡಿ ಎತ್ತರದ ರಾಮಮಂದಿರ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ಇತ್ತೀಚೆಗೆ ಇದನ್ನು 20 ಅಡಿ ಹೆಚ್ಚಳ ಮಾಡಿ 161 ಅಡಿ ಎತ್ತರದ ಮಂದಿರ ನಿರ್ಮಿಸಲಾಗುವುದು'' ಎಂದು ದೇವಾಲಯದ ಮುಖ್ಯ ವಾಸ್ತುಶಿಲ್ಪಿ ಸಿ.ಸೊಂಪುರ ಅವರ ಪುತ್ರ ಹಾಗೂ ವಾಸ್ತುಶಿಲ್ಪಿ ನಿಖಿಲ್ ಸೊಂಪುರ ತಿಳಿಸಿದ್ದರು.
''ಹಾಗೆಯೇ ರಾಮಮಂದಿರಕ್ಕೆ ಬರುವ ಭಕ್ತಾಧಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇರುವ ಹಿನ್ನೆಲೆ ಎತ್ತರವನ್ನು ಹೆಚ್ಚಿಸಲಾಗಿದೆ'' ಎಂದು ತಿಳಿಸಿದ್ದರು.