ಮುಂಬಯಿ, ಆ 04(DaijiworldNews/HR): ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆಯಲಿದ್ದು, ಇಲ್ಲಿ ನಿರ್ಮಾಣವಾಗಲಿರುವ ರಾಮ ಹಾಗೂ ಲಕ್ಷ್ಣಣರ ವಿಗ್ರಹಗಳಿಗೆ ಮೀಸೆ ಇರಲೇ ಬೇಕು ಎಂದು ಹಿಂದುತ್ವ ಪ್ರತಿಪಾದಕ ಸಂಭಾಜಿ ಭಿಡೆ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಅಯೋಧ್ಯೆಯಲ್ಲಿ ನಿರ್ಮಾಣವಾಗುವ ರಾಮ ಹಾಗೂ ಲಕ್ಷ್ಮಣರ ವಿಗ್ರಹಗಳಿಗೆ ಮೀಸೆ ಇರಬೇಕು. ಒಂದು ವೇಳೆ ವಿಗ್ರಹಗಳಿಗೆ ಮೀಸೆ ಇಟ್ಟಿಲ್ಲವೆಂದರೆ, ನನ್ನಂತಹ ಭಕ್ತರಿಗೆ ದೇವಾಲಯ ನಿರ್ಮಿಸಿದರೂ ಪ್ರಯೋಜನವಿಲ್ಲದಂತೆ ಆಗುತ್ತದೆ ಎಂದು ಭಿಡೆ ತಿಳಿಸಿದ್ದಾರೆ.
ಮಂದಿರಕ್ಕೆ ಭೂಮಿಪೂಜೆ ಮಾಡುವ ಮೊದಲು ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆಸಲ್ಲಿಸಬೇಕು ಹಾಗೂ ಆಗಸ್ಟ್ 5ರಂದು ನಡೆಯುವ ಕಾರ್ಯಕ್ರಮವನ್ನು ದಸರಾ, ದೀಪಾವಳಿ ಹಬ್ಬಗಳಂತೆ ಎಲ್ಲರೂ ಆಚರಿಸೋಣ ಎಂದು ಸಂಭಾಜಿ ಭಿಡೆ ಕರೆ ನೀಡಿದರು.
ದೊಡ್ಡ ಮೀಸೆಯನ್ನ ಹೊಂದಿರುವ ಸಂಭಾಜಿ ಭಿಡೆ ಶಿವ ಪ್ರತಿಷ್ಠಾನ್ ಹಿಂದೂಸ್ತಾನ್ ಎಂಬ ಸಂಘಟನೆಯ ಮುಖ್ಯಸ್ಥರಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಕೂಡ ನಡೆಸುತ್ತಿರುತ್ತಾರೆ.