ಬೆಂಗಳೂರು, ಆ 04(DaijiworldNews/HR): ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಲಿರುವ 1,279 ವೆಂಟಿಲೇಟರ್ಗಳು ತಿಂಗಳಾಂತ್ಯದಲ್ಲಿ ಲಭ್ಯವಾಗಲಿದ್ದು, ಈ ವೆಂಟಿಲೇಟರ್ಗಳನ್ನು ತಕ್ಷಣವೇ ಅಳವಡಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದರು.
ಕೋವಿಡ್ ದೃಢಪಟ್ಟ ಕಾರಣಕ್ಕೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯಡಿಯೂರಪ್ಪ, ರಾಜ್ಯದಲ್ಲಿ ವೆಂಟಿಲೇಟರ್ ಹಾಸಿಗೆಗಳ ಸಂಖ್ಯೆ ಹೆಚ್ಚಿಸುವ ಕುರಿತಂತೆ ದೂರವಾಣಿ ಮೂಲಕ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಭಾರತ ಸರ್ಕಾರದ ಪಿ.ಎಂ.ಕೇರ್ಸ್ ಅಡಿಯಲ್ಲಿ ರಾಜ್ಯಕ್ಕೆ 681 ವೆಂಟಿಲೇಟರ್ ಗಳು ದೊರಕಿವೆ. ಕಳೆದ ವಾರದಲ್ಲಿ ಬೆಂಗಳೂರಿನಲ್ಲಿ 166 ಸೇರಿದಂತೆ ರಾಜ್ಯದಲ್ಲಿ ವೆಂಟಿಲೇಟರ್ ಬೆಡ್ ಗಳ ಸಂಖ್ಯೆಯನ್ನು ಒಟ್ಟು 335ಕ್ಕೆ ಹೆಚ್ಚಿಸಲಾಗಿದೆ. ಇನ್ನು ಇದೇ ವಾರಾಂತ್ಯದಲ್ಲಿ ಉಳಿದ 346 ವೆಂಟಿಲೇಟರ್ ಗಳನ್ನು ಅಳವಡಿಸಲಾಗುವುದು. ಕೇಂದ್ರ ಸರ್ಕಾರ ರಾಜ್ಯಕ್ಕೆ ಒದಗಿಸಿರುವ 1279 ವೆಂಟಿಲೇಟರ್ ಗಳನ್ನು ಈ ತಿಂಗಳ ಅಂತ್ಯದಲ್ಲಿ ದೊರಕಲಿವೆ ಎಂದು ಅಧಿಕಾರಿಗಳ ಜೊತೆ ಸಭೆ ನಡೆಸಿ ತಿಳಿಸಿದರು.
ಕೋವಿಡ್ 19 ಸಂಬಂಧ ತಾತ್ಕಾಲಿಕವಾಗಿ ಒದಗಿಸಲು ಷರತ್ತು ಮತ್ತು ನಿಯಮಗಳ ಬಗ್ಗೆ ತೀರ್ಮಾನಿಸಬೇಕು ಎಂದೂ ಅಧಿಕಾರಿಗಳಿಗೆ ಸಲಹೆ ನೀಡಿದರು.