ಅಯೋಧ್ಯೆ, ಆ. 05 (DaijiworldNews/MB) : ಭವ್ಯ ಶ್ರೀ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಯ ದಿನವಾದ ಇಂದು ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಸಂಭ್ರಮಿಸಲಾಗುತ್ತಿದೆ. ಅಯೋಧ್ಯೆ ರಾಮ ಭೂಮಿ ಪೂಜೆಯ ಭಾಗವಾಗಿ ನೇಪಾಳದಲ್ಲಿ ಪಶುಪತಿನಾಥ ದೇವಾಲಯದಲ್ಲಿ ವಿಶೇಷ ರುದ್ರಾಭಿಷೇಕ ಹಾಗೂ ಷೋಡಶೋಪಚಾರ ಪೂಜೆ ನೆರವೇರಿಸಲಾಗುತ್ತಿದ್ದು ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲೂ ಶ್ರೀ ರಾಮ ಭೂಮಿ ಪೂಜೆಯ ಸಂಭ್ರಮಿಸಲಾಗುತ್ತಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಇಂದು ಮಧ್ಯಾಹ್ನ 12.44.08 ಗಂಟೆಯಿಂದ 12.44.40 ಗಂಟೆಯ 32 ಸೆಕೆಂಡುಗಳ ಶುಭಮುಹೂರ್ತ ನಿಗದಿಯಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರು ಮೋದಿಯವರು ಬೆಳ್ಳಿ ಇಟ್ಟಿಗೆ ಇರಿಸಿ ಸಾಂಕೇತಿಕ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಬಳಿಕ ಆಹ್ವಾನಿತ ಸಭಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ವೇದಿಕೆಯ ಮೇಲೆ ಮೋದಿ ಸೇರಿದಂತೆ ಐವರು ಮಾತ್ರ ಉಪಸ್ಥಿತರಿರಲಿದ್ದಾರೆ. ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ್, ಉತ್ತರಪ್ರದೇಶ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತ್ರ ಉಪಸ್ಥಿತರಿರಲಿದ್ದಾರೆ.
ಇನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿ ಬೆನ್ ಪಟೇಲ್, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಉಮಾ ಭಾರತಿ, ಬಾಬಾ ರಾಮ್ದೇವ್ ಅಯೋಧ್ಯೆಯನ್ನು ತಲುಪಿದ್ದಾರೆ. ವಿವಿಧ ರಾಜ್ಯಗಳ ಪ್ರಮುಖ ಧಾರ್ಮಿಕ ನಾಯಕರು ಅಯೋಧ್ಯೆ ತಲುಪಿದ್ದಾರೆ.