ನವದೆಹಲಿ, ಆ. 05 (DaijiworldNews/MB) : ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಭೂಮಿ ಪೂಜೆಗೆ ಇನ್ನೇನು ಕೆಲವೇ ಗಂಟೆಗಳು ಬಾಕಿಯಿದ್ದು ಏತನ್ಮಧ್ಯೆ ಸಂವಿಧಾನದ ಮೂಲ ದಾಖಲೆಯಲ್ಲಿರುವ ರಾಮಾಯಣ ಕಥೆಯನ್ನು ವಿವರಿಸುವ ಭಗವಾನ್ ರಾಮ, ಸೀತಾ ಮತ್ತು ಲಕ್ಷಣರ ರೇಖಾಚಿತ್ರವನ್ನು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಭಾರತದ ಸಂವಿಧಾನದ ಮೂಲ ದಾಖಲೆಯಲ್ಲಿ ರಾವಣನನ್ನು ಸೋಲಿಸಿದ ನಂತರ ಭಗವಾನ್ ರಾಮ, ಸೀತಾ ಮಾತೆ ಮತ್ತು ಲಕ್ಷ್ಮಣರು ಅಯೋಧ್ಯೆಗೆ ಮರಳುವ ಸುಂದರವಾದ ರೇಖಾಚಿತ್ರವು ಇದೆ. ಇದು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಅಧ್ಯಾಯದ ಆರಂಭದಲ್ಲಿ ಇದೆ. ಇದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಬೇಕೆಂದೆನಿಸಿತು'' ಎಂದು ತಿಳಿಸಿದ್ದಾರೆ.