ಹೈದರಾಬಾದ್, ಆ 05 (DaijiworldNews/PY): ಕೊರೊನಾ ಪರೀಕ್ಷಾ ವಿಚಾರದಲ್ಲಿ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಪರೀಕ್ಷಾ ಪ್ರಮಾಣ ಕಡಿಮೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಮುಖ್ಯ ವಿಜ್ಞಾನಿ ಡಾ.ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.
ಜರ್ಮನಿ, ತೈವಾನ್, ದಕ್ಷಿಣ ಕೊರಿಯಾ, ಜಪಾನ್ ಮತ್ತು ಅಮೆರಿಕದಂತಹ ಕೆಲವು ದೇಶಗಳಿಗೆ ಹೋಲಿಸಿದರೆ ಭಾರತವು ಒಟ್ಟು ಕಡಿಮೆ ಪರೀಕ್ಷಾ ಪ್ರಮಾಣವನ್ನು ಹೊಂದಿದೆ. ಪ್ರತಿಯೊಂದು ಸಾರ್ವಜನಿಕ ಆರೋಗ್ಯ ಇಲಾಖೆಯು ಪ್ರತಿ ಲಕ್ಷ ಅಥವಾ ಮಿಲಿಯನ್ಗೆ ಎಷ್ಟು ಪರೀಕ್ಷೆಗಳನ್ನು ಮಾಡಬೇಕು ಎನ್ನುವ ವಿಚಾರದ ಬಗ್ಗೆ ಕೆಲವೊಂದು ಮಾನದಂಡಗಳನ್ನು ನಿಗದಿ ಮಾಡುವುದು ಅಗತ್ಯ ಎಂದು ತಿಳಿಸಿದರು.
ವಿಡಿಯೋ-ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಿದ ಅವರು, ಪರೀಕ್ಷಾ ಸಕಾರಾತ್ಮಕತೆ ಶೇ.5ಕ್ಕಿಂತ ಕಡಿಮೆ ಇದ್ದಾಗ ನೀವು ಸಮರ್ಪಕವಾಗಿ ಪರೀಕ್ಷೆ ಮಾಡಿಕೊಳ್ಳುವುದು ಅಗತ್ಯ ಎಂದು ಎಂದು ಹೇಳಿದರು.
ಕೊರೊನಾ ವೈರಸ್ ವೇಗವಾಗಿ ವ್ಯಾಪಿಸುವ ಹಾಗೂ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶಗಳಲ್ಲಿ ಅಗತ್ಯವಾಗಿ ಪರೀಕ್ಷೆ ಮಾಡಿಸಬೇಕು. ಆದರೆ, ಐಎಲ್ಐ-ಸಾರಿ ಕಣ್ಗಾವಲು ವಿಧಾನಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಮಾಡಬಹುದಾಗಿದೆ. ಆದರೆ, ನಗರಗಳಲ್ಲಿ ವ್ಯಾಪಕವಾದ ಪರೀಕ್ಷೆ ಮಾಡಿಸಬೇಕು ಎಂದರು.
ಉತ್ತಮ ಆರೋಗ್ಯಕ್ಕಾಗಿ 8-10 ಮಾರ್ಗದರ್ಶಿ ಸೂಚಕಗಳನ್ನು ಸರ್ಕಾರ ರೂಪಿಸಬೇಕಾಗುವುದು. ಅಲ್ಲದೇ, ಸುಮುದಾಯ ಹಾಗೂ ವೈಯುಕ್ತಿಕ ಮಟ್ಟದಲ್ಲಿ ನಡೆಸುವ ಪ್ರಯತ್ನಗಳಿಂದಾಗಿ ವೈರಸ್ ಅನ್ನು ನಿಯಂತ್ರಣಕ್ಕೆ ತರಬಹುದು. ಪರೀಕ್ಷೆಯ ನಂತರ, ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಮುಖ್ಯ ಎಂದು ಹೇಳಿದರು.