ನವದೆಹಲಿ, ಆ 05 (DaijiworldNews/PY): ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಿಳಿಸಿದೆ.
ಮಲ್ಲಾಪ್ಪುರಂ ನಿವಾಸಿ ಶರಫುದ್ದೀಶರಫುದ್ದೀನ್ (38) ಮತ್ತು ಪಾಲಕ್ಕಾಡ್ ನಿವಾಸಿ ಶಫೀಕ್ (31) ಅವರು ಈಗಾಗಲೇ ಬಂಧಿಸಲ್ಪಟ್ಟಿರುವ ರಮೀಸ್ ಕೆ.ಟಿ.ಯೊಂದಿಗೆ ಕಳ್ಳಸಾಗಣೆ ಷಡ್ಯಂತ್ರ ರೂಪಿಸಿದ್ದಾರೆ ಎನ್ನು ಆರೋಪವಿದೆ.
ಪಿತೂರಿ ಮತ್ತು ಚಿನ್ನದ ಕಳ್ಳಸಾಗಾಣಿಕೆ ಆರೋಪದ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಎರ್ನಾಕುಲಂನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ನಾಲ್ಕು ದಿನಗಳ ಎನ್ಐಎ ಕಸ್ಟಡಿಗೆ ಕಳುಹಿಸಿದೆ.
ಮಲಪ್ಪುರಂ ನಿವಾಸಿಗಳಾದ ಮಹಮ್ಮದ್ ಶಫಿ ಹಾಗ ಅಬ್ದು ಪಿ.ಟಿ ಎನ್ನುವ ಇಬ್ಬರು ಆರೋಪಿಗಳನ್ನು ಜೂನ್ 31ರಂದು ಬಂಧಿಸಲಾಗಿದ್ದು, ಎರ್ನಾಕುಲಂನ ಮಹಮ್ಮದ್ ಅಲಿ ಇಬ್ರಾಹಿಂ ಹಾಗೂ ಮೊಹಮ್ಮದ್ ಅಲಿ ಎಂಬವರನ್ನು ಆಗಸ್ಟ್ ಬಂಧಿಸಲಾಗಿದೆ ಎಂದು ಎನ್ಐಎ ತಿಳಿಸಿದೆ.
ಮಹಮ್ಮದ್ ಅಲಿ ಎಂಬಾತ ಪಿಎಫ್ಐ ಸಂಘಟನೆಯ ಸದಸ್ಯನಾಗಿದ್ದು, ಪ್ರಾಧ್ಯಾಪಕರೊಬ್ಬರ ಅಂಗೈ ಕತ್ತರಿಸಿದ ಆರೋಪದ ಮೇರೆಗೆ ಈ ಹಿಂದೆ ಈತನನ್ನು ಬಂಧಿಸಲಾಗಿತ್ತು. ಆದರೆ, ಆರೋಪ ಸಾಬೀತಾಗದೇ ಆತ ಖುಲಾಸೆಗೊಂಡಿದ್ದ.
ಜುಲೈ 5ರಂದು ತಿರುವನಂತಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗಲ್ಫ್ನಿಂದ ಬಂದ ಏರ್ ಕಾರ್ಗೋದಲ್ಲಿ ಪತ್ತೆಯಾದ ಬ್ಯಾಗ್ವೊಂದರಲ್ಲಿ 15 ಕೋಟಿ ಮೌಲ್ಯದ 30 ಕೆ.ಜಿ ಬಂಗಾರವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಕಸ್ಟಮ್ಸ್ ಸೇರಿಂದತೆ ಎನ್ಐಎ ಹಾಗೂ ಆದಾಯ ತೆರಿಗೆ ಇಲಾಖೆಯು ಈ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಈ ಪ್ರಕರಣದ ಪ್ರಮುಖ ರೂವಾರಿಗಳಾದ ಸ್ವಪ್ನಾ ಸುರೇಶ್ ಹಾಗೂ ಸಂದೀಪ್ ನಾಯರ್ ಎಂಬಾತನನ್ನು ಜುಲೈ 11ರಂದು ಎನ್ಐಎ ಬೆಂಗಳೂರಿನಲ್ಲಿ ಬಂಧಿಸಿತ್ತು.