ಬೆಂಗಳೂರು, ಆ. 05 (DaijiworldNews/MB) : ಭಾರತೀಯ ಚಿತ್ರರಂಗದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೂ ಕೊರೊನಾ ಪಾಸಿಟಿವ್ ಆಗಿದೆ.
ಬುಧವಾರ (ಆ.5) ಈ ವಿಚಾರವನ್ನು ವಿಡಿಯೋ ಮೂಲಕ ಎಸ್ಪಿಬಿ ತಿಳಿಸಿದ್ದಾರೆ. ಸದ್ಯ ಅವರು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕುರಿತು ವಿಡಿಯೋ ಮೂಲಕ ಮಾಹಿತಿ ನೀಡಿರುವ ಅವರು, ಕಳೆದ ಎರಡ್ಮೂರು ದಿನಗಳಿಂದ ಸ್ವಲ್ಪ ದೇಹದಲ್ಲಿ ಅಸ್ವಸ್ಥತೆ ಇದ್ದು ವೈದ್ಯರನ್ನು ಭೇಟಿಯಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಂಡೆ ವರದಿ ಪಾಸಿಟಿವ್ ಆಗಿದೆ. ಸಣ್ಣ ಪ್ರಮಾಣದ ಲಕ್ಷಣಗಳಿದ್ದವು. ನಾನು ಮನೆ ಅವರು ಮನೆಯಲ್ಲೇ ಇದ್ದು, ವೈದ್ಯರು ಸೂಚಿಸಿದ ಔಷಧಿಗಳನ್ನು ಪಡೆದುಕೊಂಡರೆ ಸಾಕು ಎಂದರು. ಆದರೆ, ನನ್ನ ಕುಟುಂಬದ ಮೇಲಿನ ಕಾಳಜಿಯಿಂದ ಆಸ್ಪತ್ರೆಗೆ ದಾಖಲಾಗಿದ್ದೇನೆ. ಇಲ್ಲಿ ನನ್ನ ಒಳ್ಳೆಯ ಸ್ನೇಹಿತರಿದ್ದು ಆರೋಗ್ಯ ಉತ್ತಮವಾಗಿದೆ, ಯಾವುದೇ ಆತಂಕ ಪಡಬೇಡಿ ಎಂದು ಹೇಳಿದ್ದಾರೆ.
ಹಾಗೆಯೇ ನನಗೆ ಕರೆ ಮಾಡಬೇಡಿ ಎಂದು ಮನವಿ ಮಾಡಿಕೊಂಡಿರುವ ಅವರು, ನನ್ನ ಚಿಂತೆ ಬೇಡ, ಶೀತವೊಂದು ಬಿಟ್ಟರೆ, ನಾನು ಆರೋಗ್ಯವಾಗಿಯೇ ಇದ್ದೇನೆ. ಜ್ವರ ಕೂಡ ಕಡಿಮೆ ಆಗಿದೆ. ಇನ್ನು ಎರಡು ದಿನಗಳಲ್ಲಿ ನಾನು ಸಂಪೂರ್ಣ ಗುಣವಾಗಲಿದ್ದೇನೆ. ನಿಮ್ಮೆಲ್ಲರ ಧನ್ಯವಾದಗಳು ಎಂದಿದ್ದಾರೆ.
ಇನ್ನು ಆರೋಗ್ಯ ಸಚಿವ ಶ್ರೀರಾಮುಲು ಅವರು ಎಸ್ಪಿಬಿ ಶೀಘ್ರದಲ್ಲೇ ಗುಣಮುಖರಾಗಲಿ ಎಂದು ಹಾರೈಸಿದ್ದು, ಬಹುಭಾಷಾ ಗಾಯಕರಾದ ಗಾನ ಗಂಧರ್ವ ಶ್ರೀ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕೊರೊನ ಸೋಂಕು ದೃಢಪಟ್ಟಿದೆ. ಮದ್ರಾಸಿನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, ತಮ್ಮ ಆರೋಗ್ಯದ ಕುರಿತು ಯಾರೂ ಆತಂಕಪಡುವ ಅಗತ್ಯವಿಲ್ಲವೆಂದು ಸ್ವತಃ ತಿಳಿಸಿರುವ ನಮ್ಮೆಲ್ಲರ ಪ್ರೀತಿಯ ಗಾಯಕ, ಶ್ರೀಯುತ ಎಸ್ ಪಿಬಿ ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.