ನವದೆಹಲಿ, ಆ. 05 (DaijiworldNews/MB) : ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಸಾವು ಪ್ರಕರಣದ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಕೇಂದ್ರ ಒಪ್ಪಿಗೆ ಸೂಚಿಸಿದ್ದು ಬಿಹಾರ ಸರ್ಕಾರದ ಶಿಫಾರಸನ್ನು ಒಪ್ಪಿದ್ದೇವೆ ಎಂದು ಬುಧವಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಸುಶಾಂತ್ ಆತ್ಮಹತ್ಯೆ ಪ್ರಕರಣದ ಎಫ್ಐಆರ್ನ್ನು ಮುಂಬೈನಿಂದ ಪಾಟ್ನಾಕ್ಕೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ಬಾಲಿವುಡ್ ನಟಿ ರಿಯಾ ಚಕ್ರವರ್ತಿಯವರು ಸುಪ್ರೀಂ ಕದ ತಟ್ಟಿದ್ದು ಈ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಹೃಶಿಕೇಶ್ ರಾಯ್ ಅವರಿದ್ದ ನ್ಯಾಯಪೀಠ ಈ ಸಾವಿನ ನಿಜಾಂಶ ಬಹಿರಂಗವಾಗಬೇಕಿದೆ ಎಂದು ತಿಳಿಸಿದೆ. ಈ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಬಿಹಾರ ಸರ್ಕಾರದ ಶಿಫಾರಸನ್ನು ಒಪ್ಪಿದ್ದೇವೆ ಎಂದು ಸುಪ್ರೀಂಕೋರ್ಟ್ಗೆ ಹೇಳಿದ್ದಾರೆ.
ನಟ ಸುಶಾಂತ್ ಸಿಂಗ್ ರಾಜಪೂತ್ ಸಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ನಿತೀಶ್ ಕುಮಾರ್ ನೇತೃತ್ವ ಬಿಹಾರ ಸರ್ಕಾರ ಮನವಿ ಮಾಡಿಕೊಂಡಿತ್ತು.
ಮೂರು ದಿನದೊಳಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ತಿಳಿಸಬೇಕು ಎಂದು ಕೋರ್ಟ್ ಆದೇಶಿಸಿದ್ದು ಸುಶಾಂತ್ ಸಾವು ಅನುಮಾನಸ್ಪದ ಸನ್ನಿವೇಶಗಳಲ್ಲಿ ನಡೆದಿರುವಂತೆ ತೋರುತ್ತಿದೆ ಎಂದು ಸುಪ್ರೀಂ ಹೇಳಿದೆ.
ಜೂನ್ 14ರಂದು ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಬಳಿಕ ಈ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.