ನವದೆಹಲಿ, ಆ 05 (DaijiworldNews/PY): ಭಾರತೀಯ ಸಂಸ್ಕೃತಿ ಹಾಗೂ ಅದರ ಮೌಲ್ಯಗಳನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಮೋದಿ ಸರ್ಕಾರ ಯಾವಾಗಲೂ ಬದ್ಧವಾಗಿರುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂದು ಭಾರತಕ್ಕೆ ಹಾಗೂ ಹೆಮ್ಮೆಯ ದಿನವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿಪೂಜೆ ಮಾಡಿದ್ದಾರೆ. ಹಾಗಾಗಿ ಅವರು, ಮಹಾನ್ ಭಾರತೀಯ ಸಂಸ್ಕೃತಿ ಹಾಗೂ ನಾಗರಿಕತೆಯ ಇತಿಹಾಸದಲ್ಲಿ ಸುವರ್ಣ ಅಧ್ಯಾಯವನ್ನು ಉಲ್ಲೇಖಿಸುವಂತ ಹೊಸ ಯುಗವನ್ನು ಆರಂಭಿಸಿದ್ದಾರೆ ಎಂದರು.
ಅಯೋಧ್ಯೆಯ ರಾಮ ಮಂದಿರದ ನಿರ್ಮಾಣವು ಶತಮಾನಗಳಿಂದಲೂ ವಿಶ್ವದಾದ್ಯಂತ ಹಿಂದೂಗಳ ನಂಬಿಕೆಯ ಸಂಕೇತವಾಗಿದೆ. ಇಂದು ಪ್ರಧಾನಿ ಮೋದಿ ಅವರು ಶೀರಾಮನ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ರಾಮ ಮಂದಿರದ ಭೂಮಿ ಪೂಜೆಯನ್ನು ಮಾಡುವ ಮೂಲಕ ಕೋಟ್ಯಾಂತರ ಜನರ ನಂಬಿಕೆಯನ್ನು ಗೌರವಿಸುವ ಕಾರ್ಯವನ್ನು ಮಾಡಿದ್ದಾರೆ. ಇದಕ್ಕೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಭಾರತೀಯ ಸಂಸ್ಕೃತಿ ಮತ್ತು ಅದರ ಮೌಲ್ಯಗಳನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಮೋದಿ ಸರ್ಕಾರ ಯಾವಾಗಲೂ ಬದ್ಧವಾಗಿರುತ್ತದೆ. ಈ ದಿನ, ಸನಾತನ ಸಂಸ್ಕೃತಿಯ ಈ ಅಮೂಲ್ಯ ಪರಂಪರೆಗಾಗಿ ಇಷ್ಟು ವರ್ಷಗಳಿಂದ ಹೋರಾಡಿದ ಎಲ್ಲ ತಪಸ್ವಿಗಳಿಗೆ ನಾನು ವಂದಿಸುತ್ತೇನೆ.
ಅಮಿತ್ ಶಾ ಅವರಿಗೆ ಕೊರೊನಾ ದೃಢಪಟ್ಟ ಕಾರಣದಿಂದ ಅವರು ಈ ಕಾರ್ಯಕ್ರಮದಿಂದ ದೂರ ಉಳಿಯಬೇಕಾಯಿತು. ಈ ಕಾರಣದಿಂದ ಅವರು ಆಸ್ಪತ್ರೆಯಿಂದಲೇ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.