ನವದೆಹಲಿ, ಆ 05 (DaijiworldNews/PY): ಬಾಬ್ರಿ ಮಸೀದಿ ಹಿಂದೆಯೂ ಇತ್ತು. ಇನ್ನು ಮುಂದೆಯೂ ಇರಲಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಇಂದು ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ಮೋದಿ ಅವರು ಭೂಮಿಪೂಜೆ ನೆರವೇರಿಸುವ ಮುನ್ನ ಟ್ವೀಟ್ ಮಾಡಿದ್ದ ಅಸಾದುದ್ದೀನ್ ಓವೈಸಿ, ಬಾಬ್ರಿ ಮಸೀದಿ ಹಿಂದೆಯೂ ಇತ್ತು. ಇನ್ನು ಮುಂದೆಯೂ ಇರಲಿದೆ. ಇನ್ಶಾ ಅಲ್ಲಾಹ್ ಎಂದು ಬರೆದಿದ್ದು, ಇದರೊಂದಿಗೆ ಎರಡು ಫೋಟೋಗಳನ್ನು ಕೂಡಾ ಹಾಕಿದ್ದಾರೆ.
ಓವೈಸಿ ಅವರು ಈ ಹಿಂದೇಯೂ ಕೂಡಾ ಟ್ವೀಟ್ ಮಾಡಿದ್ದು, ರಾಮ ಮಂದಿರದ ಭೂಮಿ ಪೂಜೆಗೆ ಪ್ರಧಾನಿ ಮೋದಿ ಅವರು ಹಾಜರಾದಲ್ಲಿ ಸಾಂವಿಧಾನಿಕ ಪ್ರಮಾಣವಚನವನ್ನು ಉಲ್ಲಂಘನೆ ಮಾಡಿದಂತೆ. ಬಾಬ್ರಿ ಮಸೀದಿಯನ್ನು 1992ರ ಕ್ರಿಮಿನಲ್ ಜನಸಮೂಹದಿಂದ ನಾಶಮಾಡುವ ಮುನ್ನ 400 ವರ್ಷಗಳ ಕಾಲ ಬಾಬ್ರಿ ಮಸೀದಿ ಅಯೋಧ್ಯೆಯಲ್ಲಿತ್ತು ಎನ್ನುವ ವಿಚಾರವನ್ನು ನಾವು ಮರೆಯುವುದಿಲ್ಲ ಎಂದು ತಿಳಿಸಿದ್ದರು.
2019ರ ನವೆಂಬರ್ 9ರಂದು ಸುಪ್ರೀಂ ಕೋರ್ಟ್, ವಿವಾದಾತ್ಮಕವಾಗಿದ್ದ ರಾಮಂದಿರ ಹಾಗೂ ಬಾಬ್ರಿ ಮಸೀದಿ ಪ್ರಕರಣದಕ್ಕೆ ಸಂಬಂಧಪಟ್ಟಂತೆ ಐತಿಹಾಸಿಕವಾದ ತೀರ್ಪನ್ನು ನೀಡಿತ್ತು. ಅಯೋಧ್ಯೆಯಲ್ಲಿನ 2.77 ಎಕರೆ ಭೂಮಿ ಹಕ್ಕು ಹಿಂದೂಗಳಿಗೆ ಸೇರಿದ್ದು, 5 ಎಕ್ರೆ ಪ್ರತ್ಯೇಕ ಜಾಗವನ್ನು ಮಸೀದಿ ನಿರ್ಮಾಣಕ್ಕಾಗಿ ನೀಡಬೇಕು ಎಂಬುದಾಗಿ ತೀರ್ಪಿನಲ್ಲಿ ತಿಳಿಸಿತ್ತು.