ನವದೆಹಲಿ, ಆ 06 (DaijiworldNews/PY): ಇಂದಿನಿಂದ(ಆಗಸ್ಟ್ 6) ಝೈಕೊವ್-ಡಿ ಲಸಿಕೆಯ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಆರಂಭ ಮಾಡಲಿದೆ ಎಂದು ಕಂಪೆನಿ ತಿಳಿಸಿದೆ.
ಮೊದಲ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ ಪ್ಲಾಸ್ಮಿಡ್ ಡಿಎನ್ಎ ಲಸಿಕೆ ಝೈಕೊವ್-ಡಿ ಲಸಿಕೆಯು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ ಎಂದು ಕಂಡುಬಂದಿದೆ. ಕಂಪನಿಯು ಆಗಸ್ಟ್ 6 ರಿಂದ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಲಿದೆ. ಜುಲೈ 15 ರಂದು ಪ್ರಾರಂಭವಾದ ಮೊದಲನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ ಆರೋಗ್ಯವಂತರಿಗೆ ಲಸಿಕೆಯನ್ನು ನೀಡಿ ತಪಾಸಣೆ ಮಾಡಲಾಯಿತು ಎಂದು ಝೈಡೂಸ್ ಕ್ಯಾಡಿಲಾ ಕಂಪೆನಿಯು ಹೇಳಿಕೆಯೊಂದರಲ್ಲಿ ವಿವರಿಸಿದೆ.
ಝೈಕೊವ್-ಡಿ ಯ ಎರಡನೇ ಹಂತದ ಅಧ್ಯಯನದಲ್ಲಿ 1,000 ಕ್ಕೂ ಹೆಚ್ಚು ಆರೋಗ್ಯವಂತರಿಗೆ ಲಸಿಕೆ ನೀಡಿ ಅದರತ್ತ ಸೂಕ್ಷ್ಮವಾಗಿ ಗಮನಹರಿಸಲಾಗುವುದು ಎಂದು ತಿಳಿಸಿದೆ.
ಪ್ರಾಣಿಗಳಿಗೆ ಲಸಿಕೆ ನೀಡಿ ನಡೆಸಿದ ಪ್ರಿ-ಕ್ಲಿನಿಕಲ್ ಅಧ್ಯಯನದ ಸಂದರ್ಭ, ಇದು ಸುರಕ್ಷಿತವಾಗಿದೆ. ಅಲ್ಲದೇ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಕಂಡುಬಂದಿದೆ. ಲಸಿಕೆ ನೀಡಿದ ಪ್ರಾಣಿಗಳ ದೇಹದಲ್ಲಿ ರೋಗ ನಿರೋಧಕ ಶಕ್ತಿ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿತ್ತು. ಜುಲೈ 2ರಂದು ಮನುಷ್ಯರ ಮೇಲೆ ಔಷಧಿಯನ್ನು ಪ್ರಯೋಗಿಸಲು ಕೇಂದ್ರ ಔಷಧ ನಿಯಂತ್ರಕರು ಕಂಪೆನಿಗೆ ಅನುಮತಿ ಕಲ್ಪಿಸಿದ್ದರು.