ಮಡಿಕೇರಿ, ಆ 06 (DaijiworldNews/PY): ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ತಲಕಾವೇರಿಯಲ್ಲಿ ಭೂಕುಸಿತವಾಗಿದೆ. ನಾಲ್ಕು ಮಂದಿ ಕಾಣೆಯಾಗಿದ್ದಾರೆ ಎಂದು ಕೊಡಗು ಜಿಲ್ಲಾಡಳಿತ ತಿಳಿಸಿದೆ.
ಆ ಪ್ರದೇಶದಲ್ಲಿ ಪ್ರಧಾನ ಅರ್ಚಕರೂ ಹಾಗೂ ಅವರ ಕುಟುಂಬಸ್ಥರು ವಾಸವಾಗಿದ್ದರು. ಈ ಪೈಕಿ ಓರ್ವ ಅರ್ಚಕರು ನೂತನವಾಗಿ ಭಾಗಮಂಡಲದಲ್ಲಿ ಮನೆ ನಿರ್ಮಿಸಿದ್ದಾರೆ. ಇನ್ನೋರ್ವ ಅರ್ಚಕರು ತಲಕಾವೇರಿಯ ಮನೆಯಲ್ಲಿ ತಮ್ಮ ಕುಟುಂಬದೊಂದಿಗೆ ನೆಲೆಸಿದ್ದರು. ನಾಲ್ಕು ಮಂದಿ ನಾಪತ್ತೆಯಾಗಿರುವ ಬಗ್ಗೆ ಕೊಡಗು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಭಾರೀ ಮಳೆಯಿಂದಾಗಿ ಕಾವೇರಿ ಹಾಗೂ ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯುತ್ತಿದ್ದು, ಇದರೊಂದಿಗೆ ಭೂಕುಸಿತ ಹಾಗೂ ಪ್ರವಾಹವೂ ಉಂಟಾಗಿದೆ. ಭಾರೀ ಮಳೆಯಿಂದ ಕುಶಾಲನಗರ ಸಾಯಿ ಬಡವಾಣೆಯ ಹಾಗೂ ಕುವೆಂಪು ಬಡಾವಣೆಗಳು ಜಲಾವೃತವಾಗಿದ್ದು, ಅಲ್ಲಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ.
ತಲಕಾವೇರಿ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಬೆಟ್ಟದಲ್ಲಿ ಮಣ್ಣು ಕುಸಿಯುತ್ತಲೇ ಇದೆ. ಈ ಕಾರಣದಿಂದಾಗಿ ಕಾರ್ಯಚರಣೆಯ ತಂಡಕ್ಕೆ ಆ ಪ್ರದೇಶಕ್ಕೆ ತೆರಳಲು ಕಷ್ಟವಾಗುತ್ತಿದೆ.
ಕಳೆದ ಎರಡು ವರ್ಷ ಕೂಡಾ ಇದೇ ರೀತಿಯಾದ ಪ್ರವಾಹ ಹಾಗೂ ಭೂಕುಸಿತವಾಗಿದ್ದು, ಮಹಾಮಳೆಯಿಂದಾಗಿ ಸಾವು-ನೋವು ಸಂಭವಿಸಿತ್ತು.