ಬೆಂಗಳೂರು, ಆ. 06 (DaijiworldNews/MB) : ಧರ್ಮದ ಉಳಿವಿಗಾಗಿ ರಾಜ್ಯದ ಅಧಿಕಾರವನ್ನು ನಿಯಂತ್ರಿಸುವುದು ಅತ್ಯಗತ್ಯ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಅಯೋಧ್ಯೆಯ ರಾಮ ಮಂದಿರದ ಭೂಮಿ ಪೂಜೆಯ ಕುರಿತಾಗಿ ಟ್ವೀಟ್ ಮಾಡಿದ್ದಾರೆ.
ಧರ್ಮದ ಉಳಿವಿಗಾಗಿ ಹಿಂದೂಗಳು ರಾಜ್ಯ ಅಧಿಕಾರವನ್ನು ನಿಯಂತ್ರಿಸುವುದು ಅತ್ಯಗತ್ಯ. ನಾವು ರಾಜ್ಯವನ್ನು ನಿಯಂತ್ರಿಸದಿದ್ದಾಗ, ನಮ್ಮ ದೇವಾಲಯವನ್ನು ಕಳೆದುಕೊಂಡಿದ್ದೇವೆ. ನಾವು ಮರಳಿ ಪಡೆದಾಗ, ನಾವು ಪುನರ್ನಿರ್ಮಿಸಿದ್ದೇವೆ ಎಂದು ಹೇಳಿರುವ ಅವರು, ರಾಮ ಮಂದಿರ ನಿರ್ಮಾಣದ ಪ್ರಧಾನಿ ನರೇಂದ್ರ ಮೋದಿಯವರಿಂದ ಸಾಧ್ಯವಾಗಿದೆ ಎಂದಿದ್ದಾರೆ.
ಸೂರ್ಯ ತನ್ನ ಇನ್ನೊಂದು ಟ್ವೀಟ್ನಲ್ಲಿ, ಭಾರತೀಯ ತತ್ವಜ್ಞಾನಿ ಅರವಿಂದ ಘೋಷ್ ಬಗ್ಗೆ ಉಲ್ಲೇಖಿಸಿದ್ದು ಸನಾತನ ಧರ್ಮವೆಂದರೆ ಅದು ರಾಷ್ಟ್ರೀಯತೆ ಎಂದು ಅರವಿಂದ ಘೋಷ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಆದರೆ ಇದರ ಅರ್ಥವೇನು? ಪುರೋಹಿತರು ಜೈ ಶ್ರೀ ರಾಮ್ ಜೊತೆಗೆ ಭಾರತ್ ಮಾತಾ ಕಿ ಜೈ ಎಂದು ಜಪಿಸಿದರು. ಅದು ಧರ್ಮ ರಾಷ್ಟ್ರೀಯತೆ. ಧರ್ಮ ಉಳಿದುಕೊಂಡರೆ ಭಾರತ ಬದುಕುಳಿಯುತ್ತದೆ ಎಂದು ಹೇಳಿದ್ದಾರೆ.
ಅನೇಕ ಬಾರಿ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲ್ಲೇ ತೇಜಸ್ವಿ ಸೂರ್ಯ ಅವರು ಸುದ್ದಿಯಾಗಿದ್ದು ಏಪ್ರಿಲ್ನಲ್ಲಿ ಸುಮಾರು ಐದು ವರ್ಷಗಳ ಹಿಂದಿನ ತೇಜಸ್ವಿ ಟ್ವೀಟ್ ಮತ್ತೆ ವೈರಲ್ ಆಗಿದ್ದು ಅದರಲ್ಲಿ ಅರಬ್ ಮಹಿಳೆಯರ ಬಗ್ಗೆ ಬಿಜೆಪಿ ನಾಯಕ ಅವಹೇಳನಕಾರಿ ಪದಗಳನ್ನು ಬಳಸಿದ್ದರು. ಆ ಸಂದರ್ಭದಲ್ಲಿ ಸರ್ಕಾರ ಬಿಜೆಪಿ ಸಂಸದರ ಈ ಟ್ವೀಟ್ಗಳನ್ನು ನಿರ್ಬಂಧಿಸುವಂತೆ ಟ್ವಿಟರ್ಗೆ ಮನವಿ ಮಾಡಿತ್ತು ಎಂದು ವರದಿಯಾಗಿದೆ.