ಕೇರಳ, ಆ 06 (DaijiworldNews/PY): ಆಟವಾಡುತ್ತಿದ್ದ ಮಗು ಆಕಸ್ಮಾತ್ ಆಗಿ ರಾಂಬುಟಾನ್ ಹಣ್ಣು ನುಂಗಿ 15 ನಿಮಿಷ ಉಸಿರಾಟ ನಿಲ್ಲಿಸಿದ ಘಟನೆ ಕೇರಳದ ಆಲುವಾದಲ್ಲಿ ನಡೆದಿದೆ.
ಆಲುವಾ ನಿವಾಸಿಯ ದಂಪತಿಗಳ ಪುತ್ರ ಆಟ ಆಡುತ್ತಿದ್ದ ಸಂದರ್ಭ ಕೈಗೆ ಸಿಕ್ಕ ರಾಂಬುಟಾನ್ ಹಣ್ಣು ಅನ್ನು ನುಂಗಿದ್ದಾನೆ. ಪರಿಣಾಮ ಮಗು 15 ನಿಮಿಷಗಳ ಕಾಲ ಉಸಿರಾಟ ನಿಲ್ಲಿಸಿದ್ದ. ಈ ಬಗ್ಗೆ ತಿಳಿದ ಮಗುವಿನ ಪೋಷಕರು ತಕ್ಷಣವೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಪಾಸಣೆಯ ವೇಳೆ ಮಗುವಿನ ಶ್ವಾಸನಾಳದಲ್ಲಿ ಹಣ್ಣು ಸಿಲುಕಿಹಾಕಿಕೊಂಡಿರುವ ಕಂಡುಬಂದಿದ್ದು, ವೈದ್ಯರ ಸತತ ಪ್ರಯತ್ನದಿಂದಾಗಿ ಹಣ್ಣನ್ನು ಹೊರತೆಗಿಯಲಾಗಿದೆ.
ರಾಂಬುಟಾನ್ ಹಣ್ಣು ನುಂಗಿ 15 ನಿಮಿಷ ಉಸಿರಾಟ ನಿಲ್ಲಿಸಿದ ಕಾರಣ ಮೆದುಳಿಗೆ ಆಮ್ಲಜನಕ ಪೂರೈಕೆ ಆಗದೇ ತೊಂದರೆಯಾಗಿರಬಹುದು. ಹಾಗಾಗಿ ಮಗುವನ್ನು ಮೊದಲು ಐಸಿಯು ಘಟಕದಲ್ಲಿ ವೆಂಟಿಲೇಟರ್ನಲ್ಲಿ ಇರಿಸಲಾಗಿತ್ತು. ಸದ್ಯ ಮಗು ಉಸಿರಾಡುತ್ತಿದ್ದು, ಮಗು ಚೇತರಿಸಿಕೊಳ್ಳಲು ಕೆಲವು ದಿನಗಳ ಚಿಕಿತ್ಸೆ ನೀಡಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರೆ.