ಮುಂಬೈ, ಆ. 06 (DaijiworldNews/MB) : ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಗುರುವಾರ ವಿತ್ತೀಯ ನೀತಿಯನ್ನು ಪ್ರಕಟಿಸಿದ್ದು ಇದರ ಪ್ರಕಾರವಾಗಿ ರೆಪೋದರ ಪ್ರಸ್ತುತ ಚಾಲ್ತಿಯಲ್ಲಿ ಇರುವ ಶೇಕಡ 4 ರ ಹಾಗೆಯೇ ಮುಂದುವರೆಯಲಿದೆ.
ಕಳೆದ ಎರಡು ದಿನಗಳಿಂದ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ)ನ ಮಾನಿಟರಿ ಪಾಲಿಸಿ ಕಮಿಟಿ ಸಭೆ ನಡೆದಿದ್ದು ಗುರುವಾರ ಆರ್ಬಿಐ ವಿತ್ತೀಯ ನೀತಿಯನ್ನು ಪ್ರಕಟಿಸಿದೆ.
ಈ ಬಗ್ಗೆ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಪ್ರತಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಪ್ರಸ್ತುತ ಹಣದುಬ್ಬರ ಪ್ರಮಾಣವು ಹೆಚ್ಚಿರಲಿದೆ. ಈ ವರ್ಷದ ಕೊನೆಯಲ್ಲಿ ಪರಿಸ್ಥಿತಿ ಸಹಜತೆಗೆ ಮರಳಲಿದೆ. ಹಣಕಾಸು ವಲಯದಲ್ಲಿ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ಆರ್ಬಿಐ ಬದ್ದವಾಗಿದ್ದು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಚಾಲ್ತಿಯಲ್ಲಿರುವ ರೆಪೋದರ ಶೇಕಡ 4 ರ ಹಾಗೆಯೇ ಮುಂದುವರೆಯಲಿದೆ. ಪರಿಷ್ಕರಣೆಗೆ ಅವಕಾಶವನ್ನು ಇರಿಸಲಾಗಿದೆ. ರಿವರ್ಸ್ ರೆಪೋದರವೂ ಸ್ಥಿರವಾಗಿದ್ದು ಶೇ. 3.35 ದರ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಈವರೆಗೆ 250 ಮೂಲಾಂಶ ರೆಪೋ ದರ ಇಳಿಕೆ ಮಾಡಿದ ಕಾರಣದಿಂದಾಗಿ ಹಣಕಾಸು ವ್ಯವಸ್ಥೆಯಲ್ಲಿ ಬಡ್ಡಿದರವೂ ಕೂಡಾ ಬಹಳ ಕಡಿಮೆಯಾಗಿದ್ದು ಕಳೆದ ಹತ್ತು ವರ್ಷಕ್ಕೆ ಹೋಲಿಕೆ ಮಾಡಿದಾಗ ಸಾಲ ಪಡೆಯುವವರ ಪ್ರಮಾಣ ಶೇ. 10 ಕ್ಕೆ ಕುಸಿದಿದೆ. ಆ ನಿಟ್ಟಿನಲ್ಲಿ ಆರ್ಥಿಕ ಸ್ಥಿತಿಗತಿ ಅವಲೋಕಿಸಿ ನೀತಿ ಪರಿಷ್ಕರಣೆಗೆ ಅವಕಾಶವಿದೆ. ಹಾಗೆಯೇ ಈ ಹಣಕಾಸು ವರ್ಷದಲ್ಲಿ ದೇಶದಲ್ಲಿ ಜಿಡಿಪಿ ದರವು ನೆಗೆಟಿವ್ ವಲಯದಲ್ಲಿ ಇರಲಿದೆ ಎಂದು ಹೇಳಿದ್ದಾರೆ.