ನವದೆಹಲಿ, ಆ 06 (DaijiworldNews/PY): ಭಾರತೀಯ ಪ್ರಾಂತ್ಯಗಳ ಮೇಲೆ ಚೀನಾ ಸೇನೆಯು ಮೇ 17-18ರಂದು ಅತಿಕ್ರಮಣ ಮಾಡಿರುವ ಬಗ್ಗೆ ಪ್ರಧಾನಿ ಮೋದಿ ಅವರು ಯಾಕೆ ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಕ್ಷಣಾ ಸಚಿವಾಲಯದ ದಾಖಲೆಗಳನ್ನು ಉಲ್ಲೇಖಿಸಿದ್ದು, ಕುಗ್ರಾಂಗ್ ಹಾಗೂ ಪ್ಯಾಗಾಂಗ್ ತ್ಸೋನ ಉತ್ತರ ತಟದ ದಂಡೆಯನ್ನು ಚೀನಾ ಸೇನೆಯು ಮೇ 17-18ರಂದು ಅತಿಕ್ರಮಣ ಮಾಡಿದ್ದರು ಎನ್ನುವ ವಿಚಾರ ಬಹಿರಂಗವಾಗಿದೆ. ಈ ಬಗ್ಗೆ ಪ್ರಧಾನಿ ಮೋದಿ ಅವರು ಯಾಕೆ ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ.
ಪೂರ್ವ ಲಡಾಕ್ ಗಡಿಯಲ್ಲಿರುವ ಪರಿಸ್ಥಿತಿಯನ್ನು ಸರಿಯಾಗಿ ಮೌಲ್ಯಮಾಪನ ಮಾಡುವ ಹಾಗೂ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಇನ್ನು ಸಚಿವಾಲಯದ ಅಧಿಕೃತ ದಾಖಲೆಗಳು ಈ ಪರಿಸ್ಥಿತಿಯು ಸುದೀರ್ಘವಾಗಿರಲಿದೆ ಎನ್ನುವ ವಿಚಾರವನ್ನು ಬಹಿರಂಗಪಡಿಸಿದ್ದು, ಅಲ್ಲದೇ, ಚೀನಾ ಸೇನೆಯ ದಾಳಿಯು ಎಲ್ಎಸಿ ಹಾಗೂ ಗಾಲ್ವಾನ್ ಕಣಿವೆಯಲ್ಲಿ ಮೇ 5ರಿಂದ ಅಧಿಕವಾಗುತ್ತಲೇ ಇದೆ ಎನ್ನುವ ವಿಚಾರವನ್ನು ತಿಳಿಸಿದೆ.