ಕೊಡಗು, ಆ 06 (DaijiworldNews/PY): ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜಿಲ್ಲೆಯ ಮೂರು ಭಾಗಗಳಲ್ಲಿ 3 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ.
ಭಾರೀ ಮಳೆಯ ಪರಿಣಾಮ ಗುಡ್ಡ ಕುಸಿತ, ವಿದ್ಯುತ್ ಕಂಬ ಧರೆಗುರುಳಿದೆ. ಅಲ್ಲದೇ, ಪ್ರವಾಹ ಹೆಚ್ಚಾದ ಕಾರಣ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮ ಮುಳುಗಡೆಗೊಂಡಿದೆ.
ಪ್ರವಾಹದಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಜನರ ಸುರಕ್ಷತೆಗಾಗಿ ಜಿಲ್ಲೆಯ ಮೂರು ಭಾಗಗಳಲ್ಲಿ ಮೂರು ಪರಿಹಾರ ಕೇಂದ್ರವನ್ನು ತೆರೆಯಲಾಗಿದ್ದು, ಒಟ್ಟು 20 ಕುಟುಂಬದ 48 ಜನರಿಗೆ ಆಶ್ರಯ ನೀಡಲಾಗಿದೆ.
ಕೆ.ವಿ.ಜಿ ಕಾಲೇಜು ಭಾಗಮಂಡಲದಲ್ಲಿ ಒಟ್ಟು 01 ಕುಟುಂಬ 03 ಜನರು, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಕರಡಿಗೋಡು - 17 ಕುಟುಂಬ, 40 ಜನರು, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಚಿಕ್ಕಪೇಟೆ, ವಿರಾಜಪೇಟೆ - 02 ಕುಟುಂಬ 05 ಜನರು ಆಶ್ರಯಪಡೆಯುತ್ತಿದ್ದಾರೆ.
ಪರಿಹಾರ ಕೇಂದ್ರಗಳಲ್ಲಿ ಆಹಾರ ಸೇರಿದಂತೆ ಎಲ್ಲಾ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ತಲಕಾವೇರಿಯಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ಎರಡು ಮನೆಗಳು ಸಂಪೂರ್ಣವಾಗಿ ಮಣ್ಣುಪಾಲಾಗಿದ್ದು, ಕ್ಷೇತ್ರದ ಅರ್ಚಕರ ಕುಟುಂಬವು ಮಣ್ಣಿನಡಿ ಸಿಲುಕಿದೆ.
ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕರಾದ ಟಿ.ಎಸ್.ನಾರಾಯಣ್ ಆಚಾರ್, ಪತ್ನಿ, ಸೋದರ ಆನಂದ ತೀರ್ಥ ಹಾಗೂ ಇಬ್ಬರು ಅರ್ಚಕರು ಕಣ್ಮರೆಯಾಗಿದ್ದು, ಮಣ್ಣುನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ತೆರವು ಕಾರ್ಯಾಚರಣೆ ನಡೆಯುತ್ತಿದೆ.