ನವದೆಹಲಿ, ಆ. 06 (DaijiworldNews/MB) : 12 ವರ್ಷದ ಬಾಲಕಿಯ ಮೇಲೆ ಅಪರಿಚಿತ ವ್ಯಕ್ತಿಯೋರ್ವ ಲೈಂಗಿಕ ದೌರ್ಜನ್ಯ ನಡೆಸಿ ಕತ್ತರಿಯಿಂದ ಆಕೆಗೆ ಚುಚ್ಚಿ ಹಲ್ಲೆ ಮಾಡಿ, ದೇಹದ ತುಂಬ ಕಚ್ಚಿರುವ ಪೈಶಾಚಿಕ ಘಟನೆ ಪಶ್ಚಿಮ ದೆಹಲಿಯ ಪಾಸ್ಚಿಮ್ ವಿಹಾರ ಪ್ರದೇಶದಲ್ಲಿ ನಡೆದಿದ್ದು ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಬಾಲಕಿಯ ಪೋಷಕರು ಸಮೀಪದ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅವರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮನೆಯಲ್ಲಿ ಬಾಲಕಿ ಒಬ್ಬಂಟಿಯಾಗಿದ್ದು ಈ ಸಂದರ್ಭದಲ್ಲಿ ಕಾಮುಕ ಈ ಪೈಶಾಚಿಕ ಕೃತ್ಯ ಎಸಗಿದ್ದು ಬಾಲಕಿಯನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ಸಂತ್ರಸ್ಥೆಯ ಕುಟುಂಬವನ್ನು ಭೇಟಿ ಮಾಡಿರುವ ದೆಹಲಿ ಮಹಿಳಾ ಆಯೋಗದ ಸ್ವಾತಿ ಮಾಲಿವಾಲ್, ಬಾಲಕಿಯ ಸ್ಥಿತಿ ಗಂಭೀರವಾಗಿದೆ. ಆಕೆಯ ದೇಹವಿಡೀ ಕಚ್ಚಿರುವ ಗುರುತುಗಳಿವೆ. ಅಷ್ಟೇ ಅಲ್ಲದೇ ಹೊಟ್ಟೆಯ ಮೇಲೆ ಗಂಭೀರವಾದ ಗಾಯಗಳಾಗಿವೆ ಮತ್ತು ಮೂಳೆಗಳು ಮುರಿದಿದೆ ಎಂದು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನೆರೆಹೊರೆಯರನ್ನು ಪ್ರಶ್ನಿಸುತ್ತಿದ್ದು ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡಾ ಪರಿಶೀಲಿಸುತ್ತಿದ್ದಾರೆ.
ಬಾಲಕಿ ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ತಿಳಿದಿರುವ ವ್ಯಕ್ತಿಯಿಂದ ಇಂತಹ ಕೃತ್ಯ ನಡೆದಿರಬಹುದು. ಈ ಪ್ರದೇಶದಲ್ಲಿ ಹೆಚ್ಚಾಗಿ ಕಾರ್ಖಾನೆಯ ಕಾರ್ಮಿಕರು ವಾಸವಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.