ಬೆಂಗಳೂರು, ಆ. 07 (DaijiworldNews/HR): ಕೋವಿಡ್ 19ನಿಂದಾಗಿ ಅನೇಕ ಕಂಪೆನಿಗಳು ಮುಚ್ಚಿದ ಕಾರಣ, ಹೊರ ದೇಶ ಹಾಗೂ ಹೊರ ರಾಜ್ಯಗಳಲ್ಲಿ ಉದ್ಯೋಗದಲ್ಲಿದ್ದವರು ಊರಿಗೆ ಮರಳಿದ್ದಾರೆ. ಅವರ ನಿರುದ್ಯೋಗ ಆತಂಕವನ್ನು ದೂರ ಮಾಡಲು ರಾಜ್ಯ ಸರಕಾರ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ.
ಈ ಪ್ರಯೋಗವನ್ನು ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ನಡೆಸುತ್ತಿದ್ದು, ಸಾವಿರಾರು ಅಭ್ಯರ್ಥಿಗಳು ಹಾಗೂ ನೂರಕ್ಕೂ ಹೆಚ್ಚು ಕಂಪೆನಿಗಳು ಇಲ್ಲಿ ನೋಂದಣಿ ಮಾಡಿಕೊಂಡಿದೆ.
ಇದರಲ್ಲಿ ಆನ್ಲೈನ್ ಮೂಲಕವೇ ಅಭ್ಯರ್ಥಿಗಳಿಂದ ಅರ್ಜಿ ಪಡೆದು ಸಂದರ್ಶನವನ್ನೂ ಪೂರ್ಣಗೊಳಿಸಿ ನೇಮಕಾತಿ ಪತ್ರವನ್ನೂ ನೀಡಲಾಗಿದ್ದು, ಮನೆಯಿಂದಲೇ (ವರ್ಕ್ ಫ್ರಂ ಹೋಂ) ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಇದೀಗ 13 ಕಂಪೆನಿಗಳು 938 ಅಭ್ಯರ್ಥಿಗಳ ಸಂದರ್ಶನ ನಡೆಸಿ 59 ಮಂದಿಗೆ ಉದ್ಯೋಗ ನೀಡಿವೆ.
ಇನ್ನು ಈ ಹೊಸ ವ್ಯವಸ್ಥೆಯನ್ನು ಮುಂದುವರಿಸಲು ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ನಿರ್ಧರಿಸಿದೆ. ಹೀಗಾಗಿ, ರಾಜ್ಯದ ಎಲ್ಲ ಪ್ರಮುಖ ಕಂಪೆನಿಗಳು ಕಡ್ಡಾಯವಾಗಿ ಇಲಾಖೆಯ ಪೋರ್ಟಲ್ನಲ್ಲಿ ನೋಂದಣಿ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ| ಸಿ.ಎನ್.ಅಶ್ವತ್ಥನಾರಾಯಣ ಕೋವಿಡ್ 19 ನಿಂದಾಗಿ ಊರಿಗೆ ವಾಪಸಾದವರಲ್ಲಿ ನಿರುದ್ಯೋಗದ ಆತಂಕ ಹೆಚ್ಚಿತ್ತು. ಇದರಿಂದಾಗಿ ರಾಜ್ಯ ಸರ್ಕಾರ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾವಂತ ಹಾಗೂ ಕೌಶಲಯುಕ್ತ ಯುವ ಸಮೂಹ ಉದ್ಯೋಗಕ್ಕಾಗಿ ಅಲೆದಾಡುವುದನ್ನು ತಪ್ಪಿಸುವುದು ನಮ್ಮ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಬೇಕಾದ ಎಲ್ಲ ಕ್ರಮ ಕೈಗೊಂಡು ಕೌಶಲ ತರಬೇತಿ ಜತೆಗೆ ಉನ್ನತ ಶಿಕ್ಷಣದಲ್ಲಿ ಹೊಸ ಪಠ್ಯಕ್ರಮಕ್ಕೂ ಮುಂದಾಗಿದ್ದೇವೆ ಎಂದು ತಿಳಿಸಿದರು.