ಬೆಂಗಳೂರು, ಆ 07 (DaijiworldNews/PY): ರಾಜ್ಯ ಸರ್ಕಾರ ಇತಿಹಾಸದಿಂದ ಪಾಠ ಕಲಿಯಬೇಕಿತ್ತು. ದುರಂತವೆಂದರೆ ಈಗ ರಾಜ್ಯ ನಾವಿಕನಿಲ್ಲದ ದೋಣಿಯಂತಾಗಿದೆ. ರಾಜ್ಯದ ಜನರನ್ನು ಆ ದೇವರೇ ಕಾಪಾಡಬೇಕು ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಜ್ಯ ಸರ್ಕಾರ ಇತಿಹಾಸದಿಂದ ಪಾಠ ಕಲಿಯಬೇಕಿತ್ತು. ಕೇವಲ 1 ವರ್ಷದ ಹಿಂದೆ ಮಳೆ ಮಾಡಿದ ಅನಾಹುತ ಸರ್ಕಾರ ನಡೆಸುವವರ ಗಮನದಲ್ಲಿರಬೇಕಿತ್ತು. ಆದರೆ ರಾಜ್ಯದ ಜನರ ದುರಾದೃಷ್ಟ,ಕೊರೊನಾ ಕಂಟಕದ ಮಧ್ಯೆಯೆ ಪ್ರವಾಹ ಜನರನ್ನು ಬೀದಿಗೆ ತಂದು ನಿಲ್ಲಿಸಿದೆ. ದುರಂತವೆಂದರೆ ಈಗ ರಾಜ್ಯ ನಾವಿಕನಿಲ್ಲದ ದೋಣಿಯಂತಾಗಿದೆ. ರಾಜ್ಯದ ಜನರನ್ನು ಆ ದೇವರೇ ಕಾಪಾಡಬೇಕು!! ಎಂದಿದ್ದಾರೆ.
ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೊಡಗು ಸೇರಿದಂತೆ ಕರಾವಳಿ ಹಾಗೂ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಪ್ರವಾಹ ಉಂಟಾಗಿದೆ. ಅಲ್ಲದೇ, ಭಾರೀ ಮಳೆಯ ಪರಿಣಾಮ ಗುಡ್ಡಗಳು ಕುಸಿದಿವೆ. ಜನ ಜೀವನ ಅಸ್ತವ್ಯಸ್ತವಾಗಿದೆ. ಕೊರೊನಾದ ನಡುವೆ ಪ್ರವಾಹ ಜನರನ್ನು ಬೀದಿಗೆ ತಂದು ನಿಲ್ಲಿಸಿದೆ. ರಾಜ್ಯ ಸರ್ಕಾರವು ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.