ನವದೆಹಲಿ, ಆ 07 (DaijiworldNews/PY): ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ವಿಚಾರ ಸಂದರ್ಭದಲ್ಲಿ ವಿವಾದಕ್ಕೆ ಕಾರಣವಾಗಿದ್ದ ಕೇರಳದ ರೆಹಾನಾ ಫಾತಿಮಾಗೆ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ.
ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠವು ವಿಚಾರಣೆ ನಡೆಸಿದ್ದು, ಸಾಮಾಜಿಕ ಕಾರ್ಯಕರ್ತರಾದ ನೀವು ಯಾಕೆ ಈ ರೀತಿ ಮಾಡಿದಿರಿ? ಇದು ಅಶ್ಲೀಲವಾಗಿದೆ. ಈ ರೀತಿ ಮಾಡಿದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದರು.
ನಮ್ಮ ಕಕ್ಷಿದಾರರು ವಿಚಾರಣೆ ಸಂದರ್ಭ ಹಾಜರಾಗಿದ್ದಾರೆ ಅಲ್ಲದೇ, ತನಿಖೆಗೆ ಸಹಕಾರ ನೀಡಿದ್ದಾರೆ. ಈ ಪ್ರಕರಣದಲ್ಲಿ ನಮ್ಮ ಕಕ್ಷಿದಾರರನ್ನು ಬಂಧಿಸಿದ್ದಲ್ಲಿ ಜೀವನ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತದೆ. ಅವರಿಗೆ ಜಾಮೀನು ಮಂಜೂರು ಮಾಡುವಂತೆ ಮನವಿ ಮಾಡಿದರು.
ಈ ವಿಚಾರಣೆಯ ಬಳಿಕ ರೆಹಾನಾ ಫಾತಿಮಾಗೆ ನ್ಯಾಯಪೀಠ ಜಾಮೀನು ಕೊಡಲು ನಿರಾಕರಿಸಿದೆ.
ಕೇರಳ ಹೈಕೋರ್ಟ್ ಆದೇಶ ಪ್ರಶ್ನಿಸಿ ಜಾಮೀನಿಗಾಗಿ ರೆಹಾನಾ ಫಾತಿಮಾ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಮಕ್ಕಳಿಂದ ತನ್ನ ದೇಹದ ಮೇಲೆ ಚಿತ್ರ ರಚಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಹಾನಾ ಫಾತಿಮಾ ನಿರೀಕ್ಷಣಾ ಜಾಮೀನು ನೀಡಲು ಕೇರಳ ಹೈ ಕೋರ್ಟ್ ತಿರಸ್ಕರಿಸಿತ್ತು.
ಫಾತಿಮಾ ತನ್ನ ವಿರುದ್ದದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿರೀಕ್ಷಣಾ ಜಾಮೀನು ತಿರಸ್ಕರಿಸಿದ್ದ ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದರು.