ಕೇರಳ, ಆ. 07 (DaijiworldNews/SM): ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಣಾಮ ಮುನ್ನಾರ್ ನ ರಾಜಮಲಾದ ಪೆಟ್ಟಿಮುಡಿ ಬೆಟ್ಟ ಕುಸಿದು ಬಿದ್ದಿದೆ. ಬೆಟ್ಟದಡಿ ಸಿಲುಕಿ ಜನರು ಸಾವನ್ನಪ್ಪುತ್ತಿದ್ದು, ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಈ ನಡುವೆ ಮೃತರ ಕುಟುಂಬಗಳಿಗೆ ಪ್ರಧಾನಿ ಪರಿಹಾರ ಬಿಡುಗಡೆಗೊಳಿಸಿದ್ದಾರೆ.
ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೊಷಣೆ ಮಾಡಲಾಗಿದೆ.
ಭಾರೀ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಅವಶೇಷಗಳಡಿಯಲ್ಲಿ ಸುಮಾರು 80 ಮಂದಿ ಸಿಲುಕಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದರಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ವ್ಯಕ್ತವಾಗಿದೆ. ಭೂಕುಸಿತಕ್ಕೆ ಚರ್ಚ್ ಧರೆಗುರುಳಿದ್ದು ಹಲವರು ಸಿಕ್ಕಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಬೆಳಗ್ಗಿನಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ, ಸುರಿಯುತ್ತಿರುವ ಮಳೆ ಇದಕ್ಕೆ ಅಡ್ದಿಯನ್ನುಂಟು ಮಾಡುತ್ತಿದೆ. ಇಲ್ಲಿಯ ತನಕ ೧೫ ಮಂದಿಯ ಶವಗಳನ್ನು ಹೊರ ತೆಗೆಯಲಾಗಿದೆ. ಈ ನಡುವೆ ಈಗಾಗಲೇ ಏಳು ಮಂದಿಯನ್ನು ರಕ್ಷಿಸಿ ಆಸ್ಪತ್ರೆಗಳಿಗೆ ದಾಖಲಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.