ಬೆಂಗಳೂರು, ಆ. 07 (DaijiworldNews/SM): ರಾಜ್ಯದಲ್ಲಿ ಮಳೆಯ ಅಬ್ಬರ ತೀವ್ರಗೊಂಡಿದೆ. ಮಳೆಯಿಂದಾಗಿ ಹಾನಿಗೊಳಗಾದವರಿಗೆ ತಕ್ಷಣ ಪರಿಹಾರ ವಿತರಿಸುವಂತೆ ಸಿಎಂ ಬಿಎಸ್. ಯಡಿಯೂರಪ್ಪ ಆದೇಶ ನೀಡಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಣಾಮ ಹಲವು ಕಡೆಗಳಲ್ಲಿ ಪ್ರವಾಹ ಎದುರಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಭೂ ಕುಸಿತದಂತಹ ಘಟನೆಗಳು ನಡೆದಿವೆ. ಘಟನೆಯಲ್ಲಿ ಉಂಟಾಗಿರುವ ಹಾನಿಗೆ ತಕ್ಷಣ ಪರಿಹಾರ ಬಿಡುಗಡೆಗೊಳಿಸಬೇಕೆಂದು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.
ಮಳೆಯಿಂದಾಗಿ ಭಾಗಶಃ ಹಾನಿಯಾದ ಕುಟುಂಬಗಳಿಗೆ 10 ಸಾವಿರ ರೂಪಾಯಿಗಳು ಹಾಗೂ ಸಂಪೂರ್ಣ ಹಾನಿಯಾದ ಕುಟುಂಬಗಳಿಗೆ 5 ಲಕ್ಷ ರೂಪಾಯಿಗಳನ್ನು ತಕ್ಷಣವೇ ಬಿಡುಗಡೆಗೊಳಿಸಲು ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.