ಕೋಯಿಕ್ಕೋಡ್, ಆ. 07 (DaijiworldNews/SM): ಕೇರಳದ ಪಾಲಿಗೆ ಆಗಸ್ಟ್ 7-2020 ಮರೆಯಲಾಗದ ದಿನವಾಗಿದೆ. ಪೂರ್ವದಲ್ಲಿ ರವಿಯೇರಿ ಬರುತ್ತಿದ್ದಂತೆ ಜಲ ಪ್ರಳಯದ ಕಹಿಯನ್ನುಂಡ ಕೇರಳಿಗರಿಗೆ, ರವಿ ಜಾರುತ್ತಿದ್ದಂತೆ ಕೋಯಿಕ್ಕೋಡಿನ ವಿಮಾನ ನಿಲ್ದಾಣದಲ್ಲಿ ಏರ್ ಇಂದಿಯಾ ವಿಮಾನ ಪತನದ ಮತ್ತೊಂದು ಆಘಾತದ ಸುದ್ದಿ. ಈ ಘಟನೆಗಳಿಂದ ಕೇರಳ ಅಕ್ಷರಶಃ ನಲುಗಿದಂತಾಗಿದೆ.
ಬೆಳಗ್ಗಿನ ಭೂ ಕುಸಿತ ಜಲಪ್ರಳಯದಲ್ಲಿ 15ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡರೆ, ಸಂಜೆಯ ವಿಮಾನ ಪತನದಲ್ಲೂ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ರಾತ್ರಿ 10 ಗಂಟೆಯ ವರದಿಯ ತನಕ ಪೈಲಟ್ ಒಳಗೊಂಡಂತೆ 8 ಮಂದಿ ಸಾವನ್ನಪ್ಪಿರುವ ವರದಿ ಲಭ್ಯವಾಗಿದೆ.
ರನ್ ವೇಯಿಂದ ಪೈಲಟ್ ನಿಯಂತ್ರಣ ಕಳೆದುಕೊಂಡು ಜಾರಿದ್ದ ವಿಮಾನ ಕಂದಕಕ್ಕೆ ಉರುಳಿದೆ. ಘಟನೆಯ ತೀವ್ರತೆಗೆ ವಿಮಾನ ಇಬ್ಬಾಗವಾಗಿದೆ. ಹವಾಮಾನ ವೈಪರಿತ್ಯದಿಂದಾಗಿ ಈ ಅವಘಡ ಸಂಭವಿಸಿದೆ. ಇನ್ನು ವಿಮಾನದ ವೇಗವನ್ನು ಪೈಲಟ್ ನಿಯಂತ್ರಿಸಲು ಯತ್ನಿಸಿದ್ದರೂ ಕೂಡ ಪ್ರತಿಕೂಲ ಹವಾಮಾನದಿಂದಾಗಿ ನಿಯಂತ್ರಣ ಕಳೆದುಕೊಂಡಿದೆ.
ಬೆಂಕಿ ಕಾಣಿಸದೆ ತಪ್ಪಿತು ಭಾರೀ ಅನಾಹುತ:
ಇನ್ನು ರನ್ ವೇಯಿಂದ ಜಾರಿದ ಏರ್ ಇಂಡಿಯಾ ವಿಮಾನ ಕಂದಕಕ್ಕೆ ಉರುಳಿದೆ. ವಿಮಾನ ಇಬ್ಬಾಗವಾಗಿರುವುದು ಅಪಘಾತದ ತೀವ್ರತೆಯನ್ನು ಸೂಚಿಸುತ್ತದೆ. ಘಟನೆಯಲ್ಲಿ ಸಾವು ನೋವು ಸಂಭವಿಸಿದೆ. ಅವರ ಬಗ್ಗೆ ದೇಶವೇ ಕಳವಳ ವ್ಯಕ್ತಪಡಿಸುತ್ತಿದೆ. ಆದರೆ, ಇಂತಹ ತೀವ್ರ ಸನ್ನಿವೇಶದಲ್ಲಿ ಭಾರೀ ಅನಾಹುತ ತಪ್ಪಿದೆ. ಒಂದೊಮ್ಮೆ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರೆ, ಮಂಗಳೂರಿನಲ್ಲಿ 2010ರ ಮೇ 22ರಂದು ನಡೆದಿದ್ದ ಘಟನೆಯಂತಹ ಮತ್ತೊಂದು ಘಟನೆ ಮರುಕಳುಹಿಸುತ್ತಿತ್ತು ಎಂಬುವುದು ತಜ್ಞರ ಅಭಿಪ್ರಾಯ. ಆದರೆ, ಅದೃಷ್ಟ ವಶಾತ್ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಇನ್ನು ದುಬೈನಲ್ಲಿ ಸಂಕಷ್ಟದಲ್ಲಿದ್ದವರು ತವರು ಸೇರುವ ತವಕದಲ್ಲಿದ್ದ ಸಂದರ್ಭದಲ್ಲೇ ಈ ಅವಘಡ ಸಂಭವಿಸಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.
2010ರ ಮಂಗಳೂರು ವಿಮಾನ ದುರಂತ ನೆನಪಿಸಿತು ಕೇರಳದ ಅವಘಡ:
ದೇಶದಲ್ಲೇ ಬ್ಯುಸಿಯಾಗಿರುವ ವಿಮಾನ ನಿಲ್ದಾಣಗಳ ಪೈಕಿ ಕೋಯಿಕ್ಕೋಡ್ ವಿಮಾನ ನಿಲ್ದಾಣ 7ನೇ ಸ್ಥಾನವನ್ನು ಹೊಂದಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಂತೆ ಇದೂ ಕೂಡ ಟೇಬಲ್ ಟಾಪ್ ವಿಮಾನ ನಿಲ್ದಾಣವಾಗಿದೆ. ಇದೇ ಕಾರಣದಿಂದಾಗಿ ರನ್ ವೇಯಿಂದ ಜಾರಿದ್ದ ವಿಮಾನ ಕಂದಕಕ್ಕೆ ಉರುಳಿದೆ. ಈ ಘಟನೆ 2010ರ ಮೇ ತಿಂಗಳ 22ರ ಮುಂಜಾನೆ ಮಂಗಳೂರಿನಲ್ಲಿ ನಡೆದ ವಿಮಾನ ದುರಂತ ಘಟನೆಯನ್ನು ನೆನಪಿಸಿದೆ. ಮಂಗಳೂರಿನಲ್ಲಿ ನಡೆದ ಅವಘಡ ಸಂಭವಿಸಿ ಸರೀ ಹತ್ತು ವರ್ಷದ ಬಳಿಕ ಈ ದುರ್ಘಟನೆ ಸಂಭವಿಸಿದೆ. ಎರಡೂ ವಿಮಾನ ನಿಲ್ದಾಣಗಳು ಅತೀ ಹೆಚ್ಚು ಬ್ಯುಸಿಯಾಗಿರುವ ವಿಮಾನ ನಿಲ್ದಾಣಗಳಾಗಿವೆ. ಅಲ್ಲದೆ, ಎರಡೂ ವಿಮಾನ ನಿಲ್ದಾಣಗಳು ಟೇಬಲ್ ಟಾಪ್ ವಿಮಾನ ನಿಲ್ದಾಣಗಳಾಗಿವೆ. ಇನ್ನು ಈ ಎರಡೂ ಘಟನೆಗಳು ಸಾಮ್ಯಥೆಯನ್ನು ಹೊಂದಿದ್ದು, ಪೈಲಟ್ ನಿಯಂತ್ರಣ ತಪ್ಪಿ ರನ್ ವೇಯಿಂದ ಜಾರಿ ಕಂದಕಕ್ಕೆ ಉರುಳಿ ನಡೆದಿರುವ ಘಟನೆಗಳಾಗಿವೆ.
ಇನ್ನು ಕೇರಳದ ಕೋಯಿಕ್ಕೋಡ್ ನಲ್ಲಿ ನಡೆದ ದುರಂತದ ಸಂದರ್ಭದಲ್ಲಿ 185 ಮಂದಿ ಪ್ರಯಾಣಿಕರಿದ್ದರು. ಹಾಗೂ 6 ಮಂದಿ ಸಿಬ್ಬಂದಿಗಳು ವಿಮಾನದಲ್ಲಿದ್ದರು. ಅದೇ, 2010ರಲ್ಲಿ ನಡೆದಿದ್ದ ಮಂಗಳೂರಿನ ಘಟನೆಯ ಸಂದರ್ಭದಲ್ಲಿ ವಿಮಾನದಲ್ಲಿ ೧೬೦ ಮಂದಿ ಪ್ರಯಾಣಿಕರಿದ್ದರು. ಹಾಗೂ ಆರು ಮಂದಿ ವಿಮಾನ ಸಿಬ್ಬಂದಿಗಳಿದ್ದರು. ಘಟನೆಯಲ್ಲಿ 158 ಮಂದಿ ಸಾವನ್ನಪ್ಪಿದ್ದರು.