ನವದೆಹಲಿ, ಆ 08 (DaijiworldNews/PY): ಜಮ್ಮು-ಕಾಶ್ಮೀರದಲ್ಲಿ 4ಜಿ ಅಂತರ್ಜಾಲ ಮರುಸ್ಥಾಪನೆ ಬಗ್ಗೆ ಸೂಕ್ತವಾದ ನಿಲುವು ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರ ಹಾಗೂ ಜಮ್ಮು-ಕಾಶ್ಮೀರ ಆಡಳಿತಕ್ಕೆ ತಿಳಿಸಿದೆ.
ಈ ವಿಚಾರವಾಗಿ ನ್ಯಾ.ಎನ್.ವಿ.ರಮಣ ಅವರಿದ್ದ ಪೀಠ ಪ್ರಶ್ನೆ ಮಾಡಿದ್ದು, ಜಮ್ಮು-ಕಾಶ್ಮೀರದ ಕೆಲವು ಪ್ರದೇಶಗಳಲ್ಲಿ ಹೈ ಸ್ಪೀಡ್ ಅಂತರ್ಜಾಲ ಸೇವೆ ಕಲ್ಪಿಸುವುದಕ್ಕೆ ಸಾಧ್ಯವೇ ಎಂದು ಕೇಳಿದ್ದಾರೆ. ಕೇಂದ್ರ ಸರ್ಕಾರ ಈ ಪ್ರಶ್ನೆ ಪ್ರತಿಕ್ರಿಯಿಸಿದ್ದು, ಮಾಜಿ ಕೇಂದ್ರ ಸಚಿವ ಮನೋಜ್ ಸಿನ್ಹಾ ಅವರನ್ನು ಕೇಂದ್ರಾಡಳಿತ ಪ್ರದೇಶದ ಹೊಸ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಗಿದೆ. 4ಜಿ ಅಂತರ್ಜಾಲ ಮರುಸ್ಥಾಪನೆ ಬಗ್ಗೆ ಪ್ರತಿಕ್ರಿಯೆ ನೀಡಲು ಸಮಯಾವಕಾಶದ ಅಗತ್ಯವಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಕೇಂದ್ರ ಸರ್ಕಾರದ ಪರವಾಗಿ ಮನವಿ ಸಲ್ಲಿಸಿದರು.
ಅಲ್ಲದೇ, ಈ ಬಗ್ಗೆ ಪುನರ್ಪರಿಶೀಲನೆ ನಡೆಸಲು ರಚನೆಯಾಗಿದ್ದ ವಿಶೇಷ ಸಮಿತಿಯನ್ನು ಬದಲಾವಣೆ ಮಾಡಲಾಗಿಲ್ಲ ಎಂದು ಕೇಂದ್ರ ಪೀಠಕ್ಕೆ ತಿಳಿಸಿತು. ಈ ವಿಚಾರವಾಗಿ ಪೀಠವು ಎನ್ಜಿಒ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದೆ.
ಸುಪ್ರೀಂ ಕೋರ್ಟ್ ಮೇ 11ರಂದು 4ಜಿ ಅಂತರ್ಜಾಲ ಸೇವೆ ಮರುಸ್ಥಾಪನೆಗೆ ತೀರ್ಮಾನ ತೆಗೆದುಕೊಳ್ಳುವ ಸಲುವಾಗಿ ವಿಶೇಷ ಸಮಿತಿಯೊಂದನ್ನು ರಚಿಸಬೇಕು ಎಂದು ತಿಳಿಸಿತ್ತು. ಸರ್ಕಾರವು ವಿಶೇಷ ತಂಡವನ್ನು ರಚನೆ ಮಾಡಿಲ್ಲ ಎಂದು ಆರೋಪಿಸಿ ಎನ್ಜಿಒ ನ್ಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಈ ವಿಚಾರವಾಗಿ ಉತ್ತರ ನೀಡಲು ಸರ್ಕಾರ ತಡ ಮಾಡುತ್ತಿದೆ ಎಂದು ಎನ್ಜಿಒ ಪರ ವಕೀಲರು ತಿಳಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠ, ಸರ್ಕಾರ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂದು ಪರಿಶೀಲನೆ ಮಾಡಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿತು.