ಬೆಂಗಳೂರು, ಆ 08(DaijiworldNews/HR): ರಾಜ್ಯಾದ್ಯಂತ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿಅಗತ್ಯ ತುರ್ತು ಕ್ರಮ ಕೈಗೊಳ್ಳಲು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಪೂರ್ಣಅಧಿಕಾರವನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ.
ರಾಜ್ಯದ ಕಾವೇರಿ ಕೊಳ್ಳ ಭಾಗ, ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಿ ಆಶ್ಲೇಷಾ ಮಳೆಯಬ್ಬರ ಮುಂದುವರಿದಿದ್ದು, ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗುವ ಅಗತ್ಯ ತುರ್ತು ಕ್ರಮ ಕೈಗೊಳ್ಳಬಹುದು ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರಿಗೆ ತಿಳಿಸಿದ್ದಾರೆ.
ಇನ್ನು ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಉಂಟಾಗಿರುವ ನಷ್ಟದ ಅಂದಾಜು ಮಾಡಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೋವಿಡ್ 19 ಕಾರಣದಿಂದ ಮಣಿಪಾಲ ಆಸ್ಪತ್ರೆಯಲ್ಲಿದ್ದೇ ಪರಿಸ್ಥಿತಿಯ ಪೂರ್ಣ ಮಾಹಿತಿ ಪಡೆದು ಸಿಎಂ ಪಡೆದುಕೊಳ್ಳುತ್ತಿದ್ದಾರೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಶುಕ್ರವಾರ ಅನಾಹುತ ನಡೆದ ತಲಕಾವೇರಿಗೆ ಭೇಟಿ ನೀಡಿದ್ದರು. ಅವರಿಗೆ ದೂರವಾಣಿ ಕರೆ ಮಾಡಿದ ಸಿಎಂ, ಕೊಡಗಿನ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದರು.
ಇನ್ನು ಮುಖ್ಯಮಂತ್ರಿಯವರ ನಿರ್ದೇಶನದ ಮೇರೆಗೆ, ಜಿಲ್ಲಾ ಉಸ್ತುವಾರಿ ಸಚಿವರು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಮಳೆ ಪೀಡಿತ ಪ್ರದೇಶಗಳಿಗೆ ತೆರಳಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು ಅದರ ಬಗ್ಗೆಯೂ ಸಿಎಂ ಅವಲೋಕಿಸಿ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.