ವಿಜಯಪುರ, ಆ 08(DaijiworldNews/HR): ಕೊರೊನಾ ಸೋಂಕು ರಾಜ್ಯದಲ್ಲಿ ದಿನೇದಿನೆ ಹೆಚ್ಚಾಗುತ್ತಿದ್ದು ಈ ಸಂದರ್ಭದಲ್ಲಿ ಹೆಚ್ಚು ಜನರು ಸೇರಿ ಯಾವುದೇ ಹಬ್ಬ ಆಚರಣೆ ಮಾಡುವುದು ಸರಿಯಲ್ಲ ಎಂಬ ಕಾರಣಕ್ಕೆ ಅದ್ದೂರಿ ಗಣೇಶೋತ್ಸವ ಆಚರಣೆ ಬೇಡ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದರು. ಇದೀಗ ನಾವು ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡೇ ಮಾಡ್ತೀವಿ. ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುತಾಲಿಕ್ ಅವರು, 'ಮಾಲ್ ಹಾಗೂ ಬಾರ್ ತೆರೆಯಲು ಅವಕಾಶ ಕೊಡುತ್ತಾರೆ ಆದರೆ ಗಣಪತಿ ಪ್ರತಿಷ್ಠಾಪನೆ ಗೆ ಯಾಕೆ ಕೊಡುವುದಿಲ್ಲ?ನಾವು ಕೊರೊನಾ ವೈರಸ್ ಹರಡದಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ಗಣೇಶ ಚತುರ್ಥಿ ಆಚರಿಸುತ್ತೇವೆ' ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಜೊತೆಗೆ ಸರ್ಕಾರದ ವಿರುದ್ದ ಗರಂ ಆದ ಮುತಾಲಿಕ್ ಕೊರೊನಾ ನಿರ್ವಹಣೆ ವಿಚಾರದಲ್ಲಿ ಅನೇಕ ಭ್ರಷ್ಟಾಚಾರಗಳು ನಡೆಯುತ್ತಿದ್ದು, ಜನರ ಕಷ್ಟಗಳಲ್ಲಿಯೂ ಸರ್ಕಾರ ದುಡ್ಡು ಮಾಡುತ್ತಿದೆ. ಇದರ ಬಗ್ಗೆ ಈಗಾಗಲೇ ವಿರೋಧ ಪಕ್ಷದವರು ಆರೋಪಿಸಿದ್ದು ಸರಿ ಇದೆ ಎಂದು ವಾಗ್ದಾಳಿ ನಡೆಸಿದರು.