ಬೆಂಗಳೂರು, ಆ 08 (DaijiworldNews/PY): ಕೊರೊನಾ ವೈರಸ್ ನಂತರ ಎದುರಾದ ಲಾಕ್ ಡೌನ್ ಪರಿಸ್ಥಿತಿಯಿಂದ ಜನತೆ ಆದಾಯ ಇಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೈನಂದಿನ ಜೀವನ ನಡೆಸಲು ಹೆಣಗಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮನೆಬಾಗಿಲಿಗೆ ಮದ್ಯ ಪೂರೈಸುವ ಮನೆಹಾಳು ನಿರ್ಧಾರವನ್ನು ಹಿಂಪಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಸಂಪನ್ಮೂಲ ಸಂಗ್ರಹಣೆಯಲ್ಲಿ ಮುಗ್ಗರಿಸಿ ಬಿದ್ದಿರುವ ಅಬಕಾರಿ ಇಲಾಖೆ ಆನ್ಲೈನ್ ಮೂಲಕ 'ಮನೆ ಬಾಗಿಲಿಗೆ ಮದ್ಯ' ಪೂರೈಸುವ, ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಎಂಎಸ್ಐಎಲ್ ಮದ್ಯದಂಗಡಿ ತೆರೆಯುವ ಪ್ರಸ್ತಾವನೆ/ಚಿಂತನೆಯನ್ನು ಮಾಡಿದೆ. ಇದನ್ನು ಕೈಬಿಡುವಂತೆ ಒತ್ತಾಯಿಸುತ್ತೇನೆ ಎಂದಿದ್ದಾರೆ.
ಈ ಸಂಬಂಧ ಖಾಸಗಿ ಕಂಪನಿ ಜೊತೆ ಮಾತುಕತೆ ಹಾಗೂ ಅಬಕಾರಿ ಆಯುಕ್ತರು ಈ ಬಗ್ಗೆ ಒಲವು ಹೊಂದಿರುವುದು ನನ್ನ ಗಮನಕ್ಕೆ ಬಂದಿದೆ. ಸರ್ಕಾರ ಇಂತಹ ಅವಿವೇಕದ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ನಂತರ ಎದುರಾದ ಲಾಕ್ ಡೌನ್ ಪರಿಸ್ಥಿತಿಯಿಂದ ಜನತೆ ಆದಾಯ ಇಲ್ಲದೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೈನಂದಿನ ಜೀವನ ನಡೆಸಲು ಹೆಣಗಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮನೆಬಾಗಿಲಿಗೆ ಮದ್ಯ ಪೂರೈಸುವ ಮನೆಹಾಳು ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಬೆಕ್ಕಿಗೆ ಚೆಲ್ಲಾಟವಾದರೆ ಇಲಿಗೆ ಪ್ರಾಣ ಸಂಕಟ ಎಂಬಂತೆ ಮದ್ಯದಂಗಡಿಗಳನ್ನು ಹೊಸದಾಗಿ ತೆರೆಯುವ ಇಲ್ಲ ಆನ್ಲೈನ್ ಮೂಲಕ ಮದ್ಯ ಪೂರೈಸುವ ಚಿಂತನೆ ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟುಮಾಡಲಿದೆ. ತನ್ನ ಖಜಾನೆ ತುಂಬಿಸಿಕೊಳ್ಳಲು ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವುದು ಸಲ್ಲ ಎಂದು ತಿಳಿಸಿದ್ದಾರೆ.