ಲಖನೌ, ಆ. 08 (DaijiworldNews/MB) : ಅಯೋಧ್ಯೆಯ ಧನ್ನಿಪುರ್ ಗ್ರಾಮದಲ್ಲಿ ಮಸೀದಿ ನಿರ್ಮಾಣಕ್ಕಾಗಿ ನೀಡಿರುವ ಐದು ಎಕರೆ ಭೂಮಿಯಲ್ಲಿ ವಿವಿಧ ಸೌಲಭ್ಯಗಳ ಕಟ್ಟಡಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು ಈ ಕಟ್ಟಡಗಳ ಶಿಲಾನ್ಯಾಸ ನೆರವೇರಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿಯು ಮಸೀದಿ ನಿರ್ಮಾಣಕ್ಕಾಗಿ ರಚಿಸಿರುವ ಟ್ರಸ್ಟ್ ವಕ್ತಾರ ಅಥಾರ್ ಹುಸೈನ್, ಐದು ಎಕರೆ ಭೂಮಿಯಲ್ಲಿ ಆಸ್ಪತ್ರೆ, ಗ್ರಂಥಾಲಯ, ಸಮುದಾಯ ಅಡುಗೆಮನೆ, ಸಂಶೋಧನಾ ಕೇಂದ್ರವನ್ನು ಕೂಡಾ ನಿರ್ಮಿಸಲಿದ್ದು ಈ ಕಟ್ಟಡಗಳ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಆಹ್ವಾನಿಸಲಾಗುವುದು. ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಈ ಸಾರ್ವಜನಿಕ ಸೌಲಭ್ಯಗಳ ನಿರ್ಮಾಣಕ್ಕೆ ನೆರವು ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಮಸೀದಿ ನಿರ್ಮಾಣದ ಶಿಲಾನ್ಯಾಸ ಯೋಗಿ ಆದಿತ್ಯನಾಥ್ ಅವರು ಮಾಡಲಿದ್ದಾರೆಯೇ ಎಂದು ಮಾಧ್ಯಮಗಳು ಪ್ರಶ್ನಿಸಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಇಸ್ಲಾಂನ ನಾಲ್ಕು ಸಿದ್ಧಾಂತಗಳಾದ ಹನಾಫಿ, ಹಂಬಾಲಿ, ಶಫಿ ಮತ್ತು ಮಾಲಿಕಿ ಅನ್ವಯ ಮಸೀದಿಗೆ ಶಿಲಾನ್ಯಾಸ ಮಾಡುವಂತಿಲ್ಲ ಎಂದು ಹೇಳಿದ್ದು ಈ ಮಸೀದಿಗೆ ಬಾಬರಿ ಎಂದು ಹೆಸರಿಡುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಶುಕ್ರವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ''ನಾನೊಬ್ಬ ಮುಖ್ಯಮಂತ್ರಿಯಾಗಿ ಧರ್ಮದ ಬಗ್ಗೆ ತಾರತಮ್ಯ ಮಾಡುವಂತಿಲ್ಲ. ಆದರೆ ಯೋಗಿ ಹಾಗೂ ಹಿಂದೂವಾಗಿ ಮಸೀದಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ'' ಎಂದು ಹೇಳಿದ್ದರು.