ಜೈಪುರ, ಆ. 09 (DaijiworldNews/MB) : ಇಬ್ಬರು ವ್ಯಕ್ತಿಗಳು ಮುಸ್ಲಿಂ ಆಟೋ ಚಾಲಕರೊಬ್ಬರನ್ನು ಮನಬಂದಂತೆ ಥಳಿಸಿ, ಹಲ್ಲು ಮುರಿದು ಜೈ ಶ್ರೀ ರಾಮ್ ಮತ್ತು ಮೋದಿ ಜಿಂದಾಬಾದ್ ಎಂದು ಹೇಳುವಂತೆ ಒತ್ತಾಯಿಸಿದ ಘಟನೆ ರಾಜಸ್ಥಾನದ ಸಿಖರ್ ಜಿಲ್ಲೆಯಲ್ಲಿ ನಡೆದಿದೆ.
52 ವರ್ಷದ ಆಟೋ ಚಾಲಕ ಗಫಾರ್ ಅಹ್ಮದ್ ಅವರು ಕೆಲ ಪ್ರಯಾಣಿಕರನ್ನು ರೈಲು ನಿಲ್ದಾಣಕ್ಕೆ ತಲುಪಿಸಿ ಹಿಂದಿರುಗುವಾಗ ಇಬ್ಬರು ಕಿಡಿಗೇಡಿಗಳು ಇವರನ್ನು ತಡೆದು ಹಲ್ಲೆ ನಡೆಸಿದ್ದು ಗಡ್ಡ ಎಳೆದು, ಹಲ್ಲುಗಳು ಮುರಿಯುವಂತೆ ಮುಖಕ್ಕೆ ಥಳಿಸಿದ್ದಾರೆ. ಹಾಗೆಯೇ ಪಾಕಿಸ್ತಾನಕ್ಕೆ ಹೋಗು ಎಂದು ಹೇಳಿದ್ದಾರೆ. ಈ ಬಗ್ಗೆ ಎಫ್ಐಆರ್ ದಾಖಲಿಸಲಾಗಿದ್ದು ಪೊಲೀಸರು ಇಬ್ಬರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.
ಎಫ್ಐಆರ್ನಲ್ಲಿ, ರೈಲು ನಿಲ್ದಾಣಕ್ಕೆ ಕೆಲ ಪ್ರಯಾಣಿಕರನ್ನು ತಲುಪಿಸಿ ಮರಳುವ ಸಂದರ್ಭದಲ್ಲಿ ಈ ಇಬ್ಬರು ಆಟೋ ಚಾಲಕನನ್ನು ತಡೆದು ತಂಬಾಕು ಕೇಳಿದ್ದು ಅದನ್ನು ನೀಡಿದಾಗ ಮೋದಿ ಜಿಂದಾಬಾದ್ ಎಂದು ಹೇಳು ಎಂದಿದ್ದಾರೆ. ಅದನ್ನು ಹೇಳದಾಗ ಆಟೋ ಚಾಲಕನ ಕಪಾಲಕ್ಕೆ ಹೊಡೆದು ಜೈ ಶ್ರೀರಾಮ್ ಹೇಳು ಎಂದು ಪೀಡಿಸಿದ್ದು ಇದಕ್ಕೆ ಒಪ್ಪದ ಕಾರಣ 2-3 ಹಲ್ಲುಗಳು ಮುರಿಯುವಂತೆ ಹಲ್ಲೆ ನಡೆಸಿದ್ದಾರೆ. ಎಡಗಣ್ಣಿಗೂ ತೀವ್ರವಾಗಿ ಗಾಯವಾಗಿದ್ದು ಕೆಲಕಾಲ ಪ್ರಜ್ಞೆ ಇಲ್ಲದೆ ಬಿದ್ದು ಬಳಿಕ ಮನೆಗೆ ವಾಪಾಸ್ ಬಂದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಕರ್ನ ಸಾದರ್ ಪೊಲೀಸ್ ಠಾಣಾಧಿಕಾರಿ ಪುಷ್ಪೇಂದ್ರ ಸಿಂಗ್, ರಾಜೇಂದ್ರ ಜಾಟ್ ಮತ್ತು ಶಂಬು ದಯಾಳ್ ಜಾಟ್ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು ಇಬ್ಬರೂ ಕೂಡಾ ಚಾಲಕರಾಗಿದ್ದಾರೆ. ಹಾಗೆಯೇ ವ್ಯವಸಾಯ ಕೂಡಾ ಮಾಡುತ್ತಾರೆ. ಐಪಿಸಿ ಸೆಕ್ಷನ್ 323, 341, 295ಎ, 504, 506, 327, 382 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.