ಶ್ರೀನಗರ, ಆ 09(DaijiworldNews/HR):ಬಿಜೆಪಿ ಕಾರ್ಯಕರ್ತನ ಮೇಲೆ ಉಗ್ರರು ಗುಂಡು ಹಾರಿಸಿ ಗಾಯಗೊಳಿಸಿದ ಘಟನೆ ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯಲ್ಲಿ ನಡೆದಿದೆ.
ಇಂದು ಬೆಳಿಗ್ಗೆ ಬಿಜೆಪಿ ಕಾರ್ಯಕರ್ತ ಮಧ್ಯ ಕಾಶ್ಮೀರದ ಬುಡ್ಗಾಮ್ ನ ಮೊಹಿಂದ್ಪೊರಾ ಪ್ರದೇಶದ ನಿವಾಸಿ ಅಬ್ದುಲ್ ಹಮೀದ್ ನಜರ್ ಮೇಲೆ ಉಗ್ರರು ಗುಂಡು ಹಾರಿಸಿದ್ದು, ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಜರ್ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಅವರ ಸ್ಥಿತಿಯ ಕುರಿತು ಹೆಚ್ಚಿನ ವಿವರಗಳನ್ನು ಕಾಯಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇನ್ನು ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ನಾಯಕರ ಮೇಲೆ ನಡೆಯುತ್ತಿರುವ 3ನೇ ಗುಂಡಿನ ದಾಳಿ ಇದಾಗಿದ್ದು ಈ ಹಿಂದೆ ಕುಲಗಾಮ್ ಜಿಲ್ಲೆಯಲ್ಲಿ ಗುರುವಾರ ಬಿಜೆಪಿ ನಾಯಕರೊಬ್ಬರ ಮೇಲೆ ಗುಂಡಿನ ದಾಳಿ ನಡೆದಿತ್ತು. ಜಿಲ್ಲೆಯ ಬಿಜೆಪಿ ಉಪಾಧ್ಯಕ್ಷ ಮತ್ತು ಗ್ರಾಮದ ಸರ್ ಪಂಚ್ ಸಾಜದ್ ಅವರು ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದರು.
ಮಂಗಳವಾರ ಕುಲಗಾಮ್ ಗ್ರಾಮದ ಬಿಜೆಪಿ ನಾಯಕ ಅರಿಫ್ ಅಹ್ಮದ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.