ಕೋಲ್ಕತಾ, ಆ 09 (DaijiworldNews/PY): 2 ವರ್ಷದ ಮಗುವನ್ನು ಚಿಕ್ಕಮ್ಮ ಕಬೋರ್ಡ್ನಲ್ಲಿ 6 ಗಂಟೆ ಕೂಡಿ ಹಾಕಿ ಹತ್ಯೆ ಮಾಡಿರುವ ಘಟನೆ ಬಿರ್ಭುಂ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಆರೋಪಿ ತಾಜ್ಮೀರಾ ಬೀಬಿ ಎಂಬಾಕೆಯನ್ನು ಬಂಧಿಸಲಾಗಿದೆ. ಮಗುವಿನ ತಾಯಿಯೊಂದಿಗಿನ ದ್ವೇಷ ಈ ಘಟನೆಗೆ ಕಾರಣ ಎನ್ನಲಾಗಿದೆ.
ತಾಜ್ಮೀರಾ ಬೀಬಿ ಹಾಗೂ ಶಂಪಾ ಬೀಬಿ ಸಹೋದರಿಯರು. ಅಲ್ಲದೇ, ಅವರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಇಬ್ಬರ ನಡುವೆ ಜಗಳವಾಡುತ್ತಿದ್ದರು ಎನ್ನಲಾಗಿದೆ. ಹೀಗೆ ಒಂದು ದಿನ ತಾಜ್ಮೀರಾ ಬೀಬಿ ಹಾಗೂ ಶಂಪಾ ಬೀಬಿಯ 2 ವರ್ಷದ ಮಗು ಆಟಿಕೆಗಾಗಿ ಜಗಳ ಮಾಡಿಕೊಂಡಿದ್ದರು. ಈ ವೇಳೆ ಕೋಪಗೊಂಡ ತಾಜ್ಮೀರಾ ಶಂಪಾ ಬೀಬಿಯ ಮಗುವಿಗೆ ಹೊಡೆದಿದ್ದು, ಮಗು ಪ್ರಜ್ಞೆ ಕಳೆದುಕೊಂಡಿತ್ತು. ಮೊದಲೇ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದ ಕಾರಣ, ಈ ವಿಚಾರ ಶಂಪಾ ಬೀಬಿಗೆ ತಿಳಿದರೆ ಪುನಃ ಗಲಾಟೆಯಾಗಬಹುದು ಎಂದು ತಾಜ್ಮೀರಾ ಬೀಬಿ ಪ್ರಜ್ಞಾಹೀನ ಮಗುವನ್ನು ತನ್ನ ಕಬೋರ್ಡ್ ಒಳಗೆ ಮುಚ್ಚಿಟ್ಟಿದ್ದಳು.
ಸ್ವಲ್ಪ ಸಮಯದ ನಂತರ ಶಂಪಾ ಬೀಬಿ ತನ್ನ ಮಗುವನ್ನು ಹುಡುಕಲು ಆರಂಭಿಸಿದ್ದಳು. ಈ ವೇಳೆ ತಾಜ್ಮೀರಾ ಬೀಬಿ ಕೂಡಾ ಮಗುವನ್ನು ಹುಡುಕಾಡಿದಂತೆ ಓಡಾಡುತ್ತಿದ್ದಳು. ಎಷ್ಟು ಹುಡುಕಿದರೂ ಮಗು ಸಿಗದೇ ಇದ್ದ ಕಾರಣ ಶಂಪಾ ಬೀಬಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಬಳಿಕ ಮನೆಗೆ ಹೋಗಿ ಪುನಃ ಹುಡುಕಲು ಆರಂಭಿಸಿದ್ದು, ಈ ವಿಚಾರವಾಗಿ ಸಂಶಯವಿರುವ ವ್ಯಕ್ತಿಗಳ ವಿಚಾರಣೆಯನ್ನು ಕೂಡಾ ಮಾಡಲಾಗುತ್ತಿತ್ತು. ಈ ವೇಳೆ ಮಗು ತಾಜ್ಮೀರಾ ಬೀಬಿಯ ಕಬೋರ್ಡ್ ಒಳಗೆ ಪತ್ತೆಯಾಯಿತು. ಮಗುವನ್ನು ಸುಮಾರು 6 ಗಂಟೆಗಳ ಕಾಲ ಕಬೋರ್ಡ್ನಲ್ಲಿ ಮುಚ್ಚಿಟ್ಟ ಕಾರಣ ಮಗು ಉಸಿರುಗಟ್ಟಿ ಸಾವನ್ನಪ್ಪಿತ್ತು. ಈ ಬಗ್ಗೆ ತಾಜ್ಮೀರಾ ಬೀಬಿಯ ಬಳಿ ಕೇಳಿದಾಗ ನನಗೆ ಏನೂ ತಿಳಿದಿಲ್ಲ ಎಂದು ಹೇಳಿದಳು. ನಂತರ ತೀವ್ರ ವಿಚಾರಣೆ ಮಾಡಲಾಗಿದ್ದು, ಆ ವೇಳೆ ಆಕೆ ಸತ್ಯ ವಿಚಾರವನ್ನು ಬಾಯಿಬಿಟ್ಟಿದ್ದಾಳೆ. ಬಳಿಕ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.