ಬೆಂಗಳೂರು, ಆ 09 (DaijiworldNews/PY): ಕಳೆದ ವರ್ಷದ ಅತಿವೃಷ್ಟಿಯ ಹಾನಿಗೆ ಪರಿಹಾರ ಕಲ್ಪಿಸಲು ವಿಫಲವಾಗಿರುವ ಕಾರಣದಿಂದಾಗಿಯೇ ಈ ಬಾರಿಯ ಅತಿವೃಷ್ಟಿಗೆ ರಾಜ್ಯಸರ್ಕಾರ ಕೈಕಾಲು ಬಿಡುತ್ತಿದೆ. ಕಳೆದ ತಿಂಗಳೇ ಪತ್ರ ಬರೆದು ಎಚ್ಚರಿಸಿದ್ದೆ, ಎಂದಿನಂತೆ ಸರ್ಕಾರದಿಂದ ಉತ್ತರ ಇಲ್ಲ. ಈಗ ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ಹೊರಟಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕಳೆದ ವರ್ಷದ ಪ್ರವಾಹದಿಂದ ಹಾನಿಗೊಳಗಾದ ರಸ್ತೆ,ಸೇತುವೆ, ಸರ್ಕಾರಿ ಕಟ್ಟಡಗಳೆಷ್ಟು? ಅವುಗಳಲ್ಲಿ ಎಷ್ಟು ಪೂರ್ಣವಾಗಿ ದುರಸ್ತಿಗೊಂಡಿವೆ? ಖರ್ಚಾಗಿರುವ ಹಣ ಎಷ್ಟು? ಬಾಕಿ ಉಳಿದಿರುವ ಕಾಮಗಾರಿಗಳೆಷ್ಟು?ಈಗಲಾದರೂ ಈ ವಿವರ ನೀಡುವಿರಾ ಗೋವಿಂದ ಕಾರಜೋಳ ಅವರೇ? ಎಂದು ಕೇಳಿದ್ದಾರೆ.
ಕಳೆದ ವರ್ಷದ ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗಳಿಗೆ ನೀಡಿದ ಪರಿಹಾರ ಎಷ್ಟು? ಕಟ್ಟಿದ ಹೊಸ ಮನೆಗಳೆಷ್ಟು? ಪ್ರತಿಬಾರಿ ನೆರೆ ನೀರಿನಲ್ಲಿ ಮುಳುಗುವ ಮನೆಗಳೆಷ್ಟು? ಎಷ್ಟು ಕುಟುಂಬಗಳು ಶೆಡ್ನಲ್ಲಿವೆ? ಎಷ್ಟು ಕುಟುಂಬಗಳು ಬಾಡಿಗೆ ಮನೆಯಲ್ಲಿವೆ? ಈ ಮಾಹಿತಿ ನೀಡುವಿರಾ ವಿ.ಸೋಮಣ್ಣ ಅವರೇ? ಎಂದು ಪ್ರಶ್ನಿಸಿದ್ದಾರೆ.
ಕಳೆದ ವರ್ಷದ ಅತಿವೃಷ್ಟಿಯಿಂದ ಹಾನಿಗೀಡಾದ ಸರ್ಕಾರಿ ಶಾಲಾ ಕಟ್ಟಡಗಳೆಷ್ಟು? ಎಷ್ಟು ಕಟ್ಟಡಗಳನ್ನು ದುರಸ್ತಿ ಪಡಿಸಲಾಗಿದೆ ಮತ್ತು ಪುನರ್ ನಿರ್ಮಿಸಿಗೊಳ್ಳಲಾಗಿದೆ? ದುರಸ್ತಿಗೆ ಬಾಕಿ ಉಳಿದಿರುವುದು ಎಷ್ಟು? ಇದಕ್ಕಾಗಿ ಖರ್ಚಾದ ಹಣ ಎಷ್ಟು?ಈಗಲಾದರೂ ವಿವರ ನೀಡಬಹುದೇ, ಸುರೇಶ್ ಕುಮಾರ್ ಅವರೇ? ಎಂದಿದ್ದಾರೆ.
ಕಳೆದ ವರ್ಷದ ಅತಿವೃಷ್ಟಿಯಿಂದ ಹಾನಿಗೀಡಾದ ಅಂಗನವಾಡಿ ಕಟ್ಟಡಗಳೆಷ್ಟು? ಅವುಗಳಲ್ಲಿ ದುರಸ್ತಿವಾಗಿರುವುದೆಷ್ಟು? ಪುನರ್ ನಿರ್ಮಾಣವಾಗಿದ್ದೆಷ್ಟು?
ಇವುಗಳ ದುರಸ್ತಿ-ಪುನರ್ ನಿರ್ಮಾಣಕ್ಕೆ ಖರ್ಚಾದ ಹಣ ಎಷ್ಟು? ದಯವಿಟ್ಟು ವಿವರ ನೀಡುವಿರಾ? ಶಶಿಕಲಾ ಜೊಲ್ಲೆ ಅವರೇ? ಎಂದು ಹೇಳಿದ್ದಾರೆ.