ಜಲೇಸರ್, ಆ. 09 (DaijiworldNews/MB) : ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ರಾಮ ಮಂದಿರಕ್ಕಾಗಿ ಇಲ್ಲಿನ ಜಲ್ಲೇಸರ್ ಪಟ್ಟಣದಲ್ಲಿ 2,100 ಕೆ.ಜಿ ತೂಕದ ಹಿತ್ತಾಳೆ ಗಂಟೆಯನ್ನು ಸಿದ್ದಪಡಿಸಲಾಗುತ್ತಿದ್ದು ಇದನ್ನು ಹಿಂದೂ ಮುಸ್ಲಿಂ ಕುಶಲಕರ್ಮಿಗಳು ಜೊತೆಯಾಗಿ ಸಿದ್ದಗೊಳಿಸುತ್ತಿದ್ದಾರೆ.
ಕುಶಲಕರ್ಮಿ ದೌ ದಯಾಳ್ ನೇತೃತ್ವದ ತಂಡ ಗಂಟೆಯನ್ನು ಸಿದ್ದಗೊಳಿಸಿದ್ದು, ಕುಶಲಕರ್ಮಿ ಇಕ್ಬಾಲ್ ಮಿಸ್ತ್ರಿ ಅವರು ವಿನ್ಯಾಸ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ವರ್ಕ್ ಶಾಪ್ನ ಲೀಕ ವಿಕಾಸ್ ಮಿಥಲ್, ಭಾರತದ ಅತೀ ದೊಡ್ಡ ಗಂಟೆ ಇದಾಗಲಿದ್ದು ಇದು ಹಿತ್ತಾಳೆ ಮಾತ್ರವಲ್ಲದೇ ಅಷ್ಟಧಾತುಗಳಿರುವ ಗಂಟೆಯಾಗಿದೆ. ಚಿನ್ನ, ಬೆಳ್ಳಿ, ತಾಮ್ರ, ಸತು, ಸೀಸ, ತವರ, ಕಬ್ಬಿಣ ಮತ್ತು ಪಾದರಸದಿಂದ ಈ ಗಂಟೆಯನ್ನು ತಯಾರಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಶಾಪ್ ನ ಆದಿತ್ಯ ಮಿಠ್ಟಲ್ ಅವರು ಮಾತನಾಡಿ, 2,100 ಕೆ.ಜಿ.ಯ ಗಂಟೆ ತಯಾರಿಸುವಂತೆ ವಿಕಾಸ್ ಮಿಥಲ್ ಅವರಿಗೆ ನಿರ್ಮೋಹಿ ಅಖಾಡವು ಸೂಚಿಸಿದ್ದು ಸುಮಾರು 21 ಲಕ್ಷ ವೆಚ್ಚದಲ್ಲಿ ಈ ಗಂಟೆ ತಯಾರಿಸಲಾಗುತ್ತದೆ. ನಾವಿದ್ದನ್ನು ಮಂದಿರಕ್ಕೆ ಕೊಡುಗೆಯನ್ನಾಗಿ ನೀಡಬೇಕೆಂದು ಚಿಂತಿಸಿದ್ದೇವೆ ಎಂದು ಹೇಳಿದ್ದಾರೆ.
ಮೊದಲ ಬಾರಿಗೆ ಭಾರೀ ಗಾತ್ರದ ಗಂಟೆ ತಯಾರಿಸುತ್ತಿದ್ದು ಇದಕ್ಕೆ ಹಲವು ತಿಂಗಳುಗಳ ಸಿದ್ದತೆ ಬೇಕಾಗಿದೆ. ಅದರಲ್ಲೂ ಮುಖ್ಯವಾಗಿ ಈ ಗಂಟೆಯನ್ನು ರಾಮಮಂದಿರಕ್ಕಾಗಿ ತಯಾರಿಸಲಾಗುತ್ತಿದೆ ಎಂಬುದು ಇನ್ನಷ್ಟು ಉತ್ಸಾಹಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ. ಇವರು ಇದಕ್ಕೂ ಮೊದಲು ಉತ್ತರಾಖಂಡದ ಕೇದಾರನಾಥ ದೇವಸ್ಥಾನಕ್ಕಾಗಿ 101 ಕೆ.ಜಿ ತೂಕದ ಗಂಟೆಯನ್ನು ಸಿದ್ಧಪಡಿಸಿದ್ದಾರೆ.